ಮೂರ್ನಾಡು, ಜು. 1 : ಮೂರ್ನಾಡು ಲಯನ್ಸ್ ಕ್ಷಬ್‍ನ 2018-19 ಸಾಲಿನ ನೂತನ ಅಧ್ಯಕ್ಷರಾಗಿ ಬಡುವಂಡ ಬೋಪಣ್ಣ, ಕಾರ್ಯದರ್ಶಿಯಾಗಿ ಮಾಳೇಟಿರ ನವೀನ್ ಕಾರ್ಯಪ್ಪ, ಖಜಾಂಚಿಯಾಗಿ ಬಡುವಂಡ ಸುಬ್ರಮಣಿ ಆಯ್ಕೆಯಾಗಿದ್ದಾರೆ.
ಮೂರ್ನಾಡು ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗರ್ವನರ್ ಜೆ. ಕೃಷ್ಣನಂದ ರಾವ್ ಎಂಜೆಎಫ್ ನೂತನ ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಕ್ಲಬ್‍ಗೆ ಕೀರ್ತಿ ತರುವಂತಹ ಉತ್ತಮ ಸೇವಾ ಕಾರ್ಯಗಳನ್ನು ಆಯೋಜಿಸುವಂತಾಗಬೇಕು. ಅವರವರ ಅಧಿಕಾರದ ವ್ಯಾಪ್ತಿಯಲ್ಲಿ ಬರುವಂತಹ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿಕೊಂಡು ಹೋಗಬೇಕು. ಜಿಲ್ಲೆಯ ಯುವಜನತೆ ಕೊಡಗಿನಲ್ಲಿಯೆ ಇರುವಂತಾಗಬೇಕು. ಪ್ರತಿಯೋರ್ವ ಮನುಷ್ಯನು ತಮ್ಮ ಸಂಸಾರದೊಂದಿಗೆ ಅನ್ಯೋನ್ಯತೆಯಿಂದ ಇರಬೇಕು ಎಂದ ಅವರು ಲಯನ್ಸ್‍ನ ಪ್ರತಿಯೋರ್ವ ಸದಸ್ಯರೂ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಅಮ್ಮಾಟಂಡ ಚಂಗಪ್ಪ ವಹಿಸಿದ್ದು, ನೂತನ ಅಧ್ಯಕ್ಷ ಬಡುವಂಡ ಬೋಪಣ್ಣ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ಲಯನ್ಸ್ ಕ್ಲಬ್‍ನ ಪ್ರಾಂತೀಯ ಅಧ್ಯಕ್ಷೆ ರತ್ನ ಚರ್ಮಣ, ವಲಯಾಧ್ಯಕ್ಷ ಸೋಮಣ್ಣ, ಜಿಆರ್‍ಆರ್ ಸ್ವರೂಪ್ ಅಯ್ಯಪ್ಪ, ಕಾರ್ಯದರ್ಶಿ ಗಗನ್ ಮುತ್ತಣ್ಣ, ಡಯಾನ ಕಾವೇರಮ್ಮ, ಲಯನೆಸ್ ಬಿಂದು ಬೋಪಣ್ಣ, ಖಜಾಂಚಿ ಪಳಂಗಂಡ ಕಾವೇರಪ್ಪ, ನೂತನ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಚಂಗಪ್ಪ ಸ್ವಾಗತಿಸಿ, ನವೀನ್ ಕಾರ್ಯಪ್ಪ ವಂದಿಸಿದರು.