ಮಡಿಕೇರಿ, ಜು. 2: ಕಲ್ಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್ ಉಲ್ಲಾಖಾನ್ ಹಾಗೂ ಆತನ ಪತ್ನಿ ಹಿಂದು ಧರ್ಮದ ಹೆಣ್ಣುಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ ಮಾತನಾಡಿ, ಇರ್ಷಾದ್ ಉಲ್ಲಾಖಾನ್ ಸರ್ಕಾರಿ ಉನ್ನತ ಹುದ್ದೆಯಲ್ಲಿದ್ದು, ತನ್ನ ಪತ್ನಿ ಜೊತೆ ಸೇರಿಕೊಂಡು ಮುಗ್ದ ಹೆಣ್ಣು ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸುವ ವ್ಯವಸ್ಥಿತ ಷÀಡ್ಯಂತ್ರವನ್ನು ಮಾಡುತ್ತಿದ್ದಾರೆ. ಇಂತಹ ಹೀನಾಯ ಕೃತ್ಯ ಎಸಗಿರುವ ಇಬ್ಬರು ಆರೋಪಿಗಳಿಗೆ ಕಾನೂನಿನಡಿ ಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ವಿದ್ಯಾರ್ಥಿ ಪರಿಷತ್ ಪ್ರಮುಖ್ ವಿನಯಕುಮಾರ್ ಮಾತನಾಡಿ, ಮಧ್ಯಪ್ರದೇಶ ರಾಜ್ಯದಲ್ಲಿ ಏಳು ವರ್ಷದ ಹೆಣ್ಣು ಮಗುವಿನ ಮೇಲೆ ಅಮಾನುಷವಾಗಿ ಅತ್ಯಾಚಾರ ವೆಸಗಿದ ಇರ್ಫಾನ್‍ನನ್ನು ಮರಣ ದಂಡನೆ ಶಿಕ್ಷೆಗೆ ಒಳಪಡಿಸಬೇಕು. ಇದೇ ರೀತಿಯ ಸುಮಾರು ಮುಗ್ದ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದರೂ, ಇದರ ತನಿಖೆ ಮಾತ್ರ ವಿಳಂಬವಾಗಿದೆ. ಯಾವದೇ ಪಕ್ಷದ ರಾಜಕೀಯ ಪ್ರತಿನಿಧಿಗಳು, ಅಧಿಕಾರಿ ವರ್ಗ ಈ ಬಗ್ಗೆ ಗಮನ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಜರಂಗದಳ ಜಿಲ್ಲಾ ಸಹ ಸಂಚಾಲಕ ಚೇತನ್, ಮಡಿಕೇರಿ ತಾಲೂಕು ಸಂಚಾಲಕ ಮನು ರೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮನು ಮಹೇಶ್, ಪ್ರಮುಖರಾದ ವಿ.ಹಿಂ.ಪ. ಜಿಲ್ಲಾ ಕಾರ್ಯಾಧ್ಯಕ್ಷ ಐ.ಎಂ. ಅಪ್ಪಯ್ಯ, ನಂದಕುಮಾರ್, ಉಪಾಧ್ಯಕ್ಷ ಮೇದಪ್ಪ ಹಾಜರಿದ್ದರು.