ಸೋಮವಾರಪೇಟೆ, ಜು. 1: ತಾಲೂಕಿನ ಶಾಂತಳ್ಳಿ ಹೋಬಳಿ ಹಲವು ವಿಶೇಷತೆಗಳಿಗೆ ಹೆಸರುವಾಸಿಯಾಗಿದ್ದು, ಇದೀಗ ಸಾರ್ವಜನಿಕ ಶೌಚಾಲಯದ ಕೊರತೆಯಿಂದ ಮತ್ತೆ ಹೆಸರಾಗುತ್ತಿದೆ. ಭೌಗೋಳಿಕವಾಗಿ ಹೆಚ್ಚು ವಿಸ್ತಾರವಾಗಿರುವ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಶಾಂತಳ್ಳಿ ಗ್ರಾಮದಲ್ಲಿ ನಾಡಕಚೇರಿ ಇದೆ. ಇದರೊಂದಿಗೆ ಹತ್ತು ಹಲವು ಸಾರ್ವಜನಿಕ ಕಚೇರಿಗಳಿದ್ದರೂ ಇಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ!

ಶಾಂತಳ್ಳಿ ಗ್ರಾಮದಲ್ಲಿ ನಾಡಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಕಾರ್ಪೋರೇಷನ್ ಬ್ಯಾಂಕ್, ಅಂಚೆ ಕಚೇರಿ, ಶ್ರೀಕುಮಾರಲಿಂಗೇಶ್ವರ ದೇವಾಲಯ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ವಿಎಸ್‍ಎಸ್‍ಎನ್ ಬ್ಯಾಂಕ್, ಕೃಷಿ ಇಲಾಖಾ ಕಚೇರಿಗಳಿದ್ದು, ದಿನನಿತ್ಯ ನೂರಾರು ಮಂದಿ ಸಾರ್ವಜನಿಕರು ಕಚೇರಿ ಕೆಲಸಗಳಿಗಾಗಿ ಶಾಂತಳ್ಳಿಗೆ ಆಗಮಿಸುತ್ತಾರೆ.

ಇದರೊಂದಿಗೆ ವಾರದ ಕೊನೆ ದಿನಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಇದೇ ಮಾರ್ಗವಾಗಿ ಮಲ್ಲಳ್ಳಿ ಜಲಪಾತಕ್ಕೆ ತೆರಳುತ್ತಿದ್ದು, ಶಾಂತಳ್ಳಿಯಲ್ಲಿ ಹಲವರು ವಾಹನಗಳನ್ನು ನಿಲ್ಲಿಸಿ ಅಂಗಡಿ, ಬೇಕರಿಗಳಲ್ಲಿ ಅವಶ್ಯಕ ತಿಂಡಿ ತಿನಿಸುಗಳನ್ನು ಖರೀದಿಸುತ್ತಾರೆ. ಆದರೆ ಮೂಲಭೂತವಾಗಿ ಇರಬೇಕಾದ ಶೌಚಾಲಯವಿಲ್ಲದೇ ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜಿಸುತ್ತಿದ್ದಾರೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಶಾಂತಳ್ಳಿ, ಬೆಟ್ಟದಳ್ಳಿ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಗಳು ಒಳಪಡುತ್ತಿದ್ದು, ಪುಷ್ಪಗಿರಿ ಬೆಟ್ಟತಪ್ಪಲಿನ ಕುಡಿಗಾಣ, ತಡ್ಡಿಕೊಪ್ಪ, ಕೊತ್ನಳ್ಳಿ, ಹೆಗ್ಗಡಮನೆ, ತೋಳೂರುಶೆಟ್ಟಳ್ಳಿಯ ಕೂತಿ ಸೇರಿದಂತೆ ಇನ್ನಿತರ ದೂರದ ಗ್ರಾಮಗಳಿಂದ ಬ್ಯಾಂಕ್, ಕಂದಾಯ ಇಲಾಖಾ ಕೆಲಸಗಳಿಗಾಗಿ ಶಾಂತಳ್ಳಿಗೆ ಆಗಮಿಸುತ್ತಾರೆ. ಈ ಭಾಗಕ್ಕೆ ಬಸ್ ಸೌಕರ್ಯ ಕಡಿಮೆಯಿದ್ದು, ಬೆಳಿಗ್ಗೆ ಆಗಮಿಸಿದರೆ ಸಂಜೆಯೇ ಮನೆಸೇರಬೇಕಾದ ಪರಿಸ್ಥಿತಿಯೂ ಇದೆ.

ಇಂತಹ ಸನ್ನಿವೇಶದಲ್ಲಿ ಶೌಚಾಲಯವಿಲ್ಲದೇ ಸಾರ್ವಜನಿಕರು ಪರದಾಟ ಅನುಭವಿಸುತ್ತಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದಡಿ ಬಯಲು ಶೌಚಮುಕ್ತ ಭಾರತ ಮಾಡಲು ಸರ್ಕಾರಗಳು ಚಿಂತಿಸುತ್ತಿದ್ದು, ಸಮುದಾಯ ಶೌಚಾಲಯಗಳ ಬಗ್ಗೆಯೂ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಶಾಂತಳ್ಳಿಯಲ್ಲಿ ಸಾರ್ವಜನಿಕರ ಶೌಚಾಲಯ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.