ಆಲೂರು-ಸಿದ್ದಾಪುರ, ಜು. 1: ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ದೊಡ್ಡಕೊಳತೂರು, ಚಿಕ್ಕಕೊಳತೂರು ಕಾಜೂರು, ಆಲೂರು-ಸಿದ್ದಾಪುರ, ಆಲೂರು, ಮಾಲಂಬಿ ದೊಡ್ಡಕಣಗಾಲು, ಹೊಸಗುತ್ತಿ ಬಾಣವಾರ, ಸಿದ್ದಲಿಂಗಪುರ, ಹೆಬ್ಬಾಲೆ ಮುಂತಾದ ಭಾಗಗಳಲ್ಲಿ ಇಲ್ಲಿಯ ರೈತರು ಸಿಹಿಗೆಣಸನ್ನು ಬೆಳೆಯುತ್ತಾರೆ. ಈ ಗೆಣಸನ್ನು ಖರೀದಿಸಲು ವ್ಯಾಪಾರಿಗಳು ಹಾಸನ ಹಾಗೂ ಕೇರಳದಿಂದ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಇದಕ್ಕೆ ಇಲ್ಲಿ ಮಾರುಕಟ್ಟೆಯಿಲ್ಲ ಹಾಗೆ ಇತರ ಬೆಳೆಗಳಿಗೆ ಹೋಲಿಕೆ ಮಾಡಿದರೆ ಈ ಬೆಳೆಗೆ ಕೆಲಸವು ಕಡಿಮೆ ಎಂದು ಸುಮಾರು 4 ರಿಂದ 5 ವರ್ಷಗಳಿಂದ ಇದನ್ನೆ ಹೆಚ್ಚಾಗಿ ರೈತರು ಬೆಳೆಯತ್ತಿದ್ದಾರೆ. ಪ್ರಾರಂಭದ ವರ್ಷದಲ್ಲಿ ಪ್ರತಿ ಕೆ.ಜಿ.ಗೆ ರೂ. 20 ರಿಂದ 25 ಇರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಬೆಳೆಗೆ ಕೇವಲ ಮೂರರಿಂದ ನಾಲ್ಕೂ ರೂಪಾಯಿ ಮಾತ್ರ ದೊರೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಕೊಳವೆ ಬಾವಿಯ ಮೂಲಕ ನೀರಾಯಿಸಿ, ದನದ ಗೊಬ್ಬರ ಸೇರಿದಂತೆ ಇನ್ನಿತರ ರಾಸಾಯನಿಕ, ಗೊಬ್ಬರವನ್ನು ಸಹ ಹಾಕಬೇಕಾಗಿದೆ. ಹಾಗಿದ್ದಾಗ ಮಾತ್ರ ಈ ಬೆಳೆ ಉತ್ತಮ ಇಳುವರಿ ಬರುವದು. ಬೆಳೆಯಲು ಸುಮಾರು ರೂ. 10 ರಿಂದ 15 ಪ್ರತಿ ಕೆ.ಜಿ.ಗೆ ವೆಚ್ಚ ಮಾಡಬೇಕಾಗಿದೆ. ಆದರೆ ಈ ಬೆಳೆಗೆ ಸಿಗುತ್ತಿರುವ ಬೆಲೆ ಮಾತ್ರ ರೂ. 5 ರಿಂದ 6 ಮಾತ್ರ, ಅನೇಕ ರೈತರು ಬ್ಯಾಂಕ್ ಸಾಲ ಸೇರಿದಂತೆ ಕೈಸಾಲವನ್ನು ಮಾಡಿಕೊಂಡು ಬೆಳೆ ಬೆಳೆಯಲು ಕೈಹಾಕಿದ್ದಾರೆ.
ಸಿಹಿಗೆಣಸನ್ನು ಇದೀಗ ರೈತರು ತಮ್ಮ ಹೊಲಗದ್ದೆಗಳಿಂದ ತೆಗೆಯಲೇ ಬೇಕಾಗಿದೆ, ಕಾರಣ ಮಳೆ ಪ್ರಾರಂಭವಾಗಿರುವದರಿಂದ ಭತ್ತದ ಬೆಳೆಯನ್ನು ಬೆಳೆಯಲು ಗದ್ದೆಗಳನ್ನು ಸರಿಮಾಡಬೇಕಾಗಿದೆ. ಹಾಗಾಗಿ ಇದೀಗ ಇದನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು ಈ ಸಿಹಿಗೆಣಸಿಗೆ ಕೇವಲ ರೂ. 3 ರಿಂದ 4 ಕ್ಕೆ ಮಾತ್ರ ಕೇಳುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ನೀರಿನಲ್ಲಿ ತೊಳೆದು ಕೊಡಬೇಕು, ಇಲ್ಲವಾದಲ್ಲಿ ಈ ಗೆಣಸಿಗೆ ಬೆಲೆಯೇ ಇಲ್ಲ. ರೈತರಿಗೆ ಅನಿವಾರ್ಯವಾಗಿ ಈ ಸಿಹಿಗೆಣಸನ್ನು ಸಿಕ್ಕಿದ ಬೆಲೆಗೆ ವ್ಯಾಪಾರಿಗಳಿಗೆ ನೀಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಈ ಸಿಹಿಗೆಣಸು (ಬೆಲ್ಲ ಗೆಣಸು) ಬೆಳೆಯುತ್ತಿದ್ದು, ಪ್ರಾರಂಭದಲ್ಲಿ ಖರ್ಚು ಮಾಡಿದಕ್ಕಿಂತ ಹೆಚ್ಚು ಬೆಲೆ ಸಿಗುತ್ತಿತ್ತು. ಇಂದಿನ ಬೆಲೆಯನ್ನು ನೋಡಿದರೆ ನಮ್ಮ ಶ್ರಮಕ್ಕೆ ತಕ್ಕ ಬೆಲೆ ಇಲ್ಲ. ನಾವು ಈ ಬೆಳೆಯನ್ನು ಕೀಳಲು ಪ್ರತಿಯೊಂದು ಕೆ.ಜಿ.ಗೆ ಸುಮಾರು ರೂ. 8 ರಿಂದ 10 ಖರ್ಚು ತಗಲುತ್ತದೆ. ಇಷ್ಟು ಕಡಿಮೆ ಬೆಲೆಗೆ ನಾವು ನೀಡಲೆ ಬೇಕಾದ ಅನಿವಾರ್ಯತೆ ಬೇಸರ ತಂದಿದೆ ಎಂದು ದೊಡ್ಡಕೊಳತ್ತೂರು ಹರೀಶ್ ಪ್ರತಿಕ್ರಿಯಿಸಿದ್ದಾರೆ. ಈ ಸಿಹಿಗೆಣಸು ಚಿಪ್ಸ್ ಮಾಡಲು ಬೇರೆ ರಾಜ್ಯಗಳಿಗೆ ರವಾನೆಯಾಗುತ್ತದೆ. ಈ ಬೆಳೆಯು ಪ್ರಾರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ರೈತರು ಬೆಳೆಯುತ್ತಿದ್ದುದರಿಂದ ಉತ್ತಮ ಬೆಲೆ ಸಿಗುತ್ತಿತ್ತು. ಇದೀಗ ಹೆಚ್ಚಾಗಿ ಬೆಳೆಯುವದರಿಂದ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಒಂದೇ ಬೆಳೆಯನ್ನು ಬೆಳೆಯದೆ ಪ್ರತಿವರ್ಷ ಬೇರೆ ಬೆಳೆಗಳನ್ನು ಬೆಳೆಯಬೇಕಾಗಿದೆ ನಮ್ಮ ಇಲಾಖೆಯಿಂದ ಅವರರವರ ವ್ಯಾಪ್ತಿಯಲ್ಲಿ ಏನು ಬೆಳೆಯನ್ನು ಬೆಳೆದರೆ ಅದಾಯ ಹೆಚ್ಚಿಸಿಕೊಳ್ಳಬಹುದೆಂಬ ಮಾಹಿತಿಯನ್ನು ಪಡೆದುಕೊಂಡು ಬೆಳೆಯಲಿ. ಮುಂದಿನ ದಿನಗಳಲ್ಲಿ ಹಾಗಿದ್ದಾಗ ನಷ್ಟ ಅನುಭವಿಸುವದಿಲ್ಲ ಎಂದು ಅಧಿಕಾರಿ ಮುತ್ತಪ್ಪ ಪ್ರತಿಕ್ರಿಯಿಸಿದ್ದಾರೆ. - ದಿನೇಶ್ ಮಾಲಂಬಿ