ಸೋಮವಾರಪೇಟೆ, ಜು. 2: ಸದ್ವಿಚಾರಗಳೊಂದಿಗೆ ಆಧ್ಯಾತ್ಮಿಕ ಸಂಪತ್ತನ್ನು ಗಳಿಸಿದರೆ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಯಸಳೂರು ತೆಂಗಲಗೋಡು ಮಠಾಧೀಶರಾದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಕೊಡಗು ಜಿಲ್ಲಾ ಭಾರತ್ ಸ್ವಭಿಮಾನ್ ಟ್ರಸ್ಟ್ ಹಾಗೂ ಪತಂಜಲಿ ಯೋಗ ಸಮಿತಿ ಇದರ ಸಂಯುಕ್ತಾಶ್ರಯದಲ್ಲಿ ಮುಳ್ಳೂರಿನಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.ಮನಸ್ಸನ್ನು ಹತೋಟಿಗೆ ತಂದು ಸದ್ವಿಚಾರಗಳನ್ನು ಮಾತ್ರ ಹೊರ ಹಾಕುವಂತೆ ಮನಸ್ಸನ್ನು ಗೆಲ್ಲುವ ಕಾರ್ಯವಾದಾಗ ಆತ ಜಿತೇಂದ್ರಿಯನಾಗಲು ಸಾಧ್ಯ. ಮನುಷ್ಯನ ಭೌತಿಕ ಜೀವನದಲ್ಲಿ ಆತ್ಮೋದ್ಧಾರಕ್ಕೆ ಆದ್ಯತೆ ನೀಡಬೇಕು. ಮನುಷ್ಯನ ಆಚಾರ, ವಿಚಾರ, ಸಹವಾಸ, ಗುಣ, ನಡತೆಗಳು ಸಕಾರಾತ್ಮಕವಾದಾಗ ಆತ ಸರ್ವರಲ್ಲಿಯೂ ಒಳ್ಳೆಯವನೆನೆಸಿ, ಸತ್ಸಂಗಿಯಾಗುತ್ತಾನೆ ಎಂದರು.

ಸಭಾ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಎಂ.ಎಸ್. ಚಂದ್ರಪ್ಪ ಉದ್ಘಾಟಿಸಿದರು. ಪತಂಜಲಿ ಯೋಗ ಸಮಿತಿ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್‍ನ ಜಿಲ್ಲಾಧ್ಯಕ್ಷ ಎಂ.ಆರ್. ಚಂದ್ರಪ್ಪ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಂಗಳೂರಿನ ಸಾಹಿತ್ಯರತ್ನ, ವೇದಬ್ರಹ್ಮ ಡಿ. ವಿಷ್ಣು ಭಟ್ ಉಪನ್ಯಾಸ ನೀಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕಲ್ಲಹಳ್ಳಿ ಮಠಾಧೀಶರಾದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಶನಿವಾರಸಂತೆಯ ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶನಿವಾರಸಂತೆ ಸಿಡಿಗಳಲೆ ಮಠಾಧೀಶರಾದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲುಮಠದ ಮಠಾಧೀಶರಾದ ಮಹಾಂತ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಸತ್ಸಂಗ ಕಾರ್ಯಕ್ರಮದಲ್ಲಿ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಹಾಗೂ ಕುಶಾಲನಗರದ ಪಾಂಚಜನ್ಯ ಭಜನಾ ಮಂಡಳಿಯ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಹಲಸುಲಿಗೆ ಗ್ರಾಮದ ಖುಷಿ ಹೆಚ್. ಆಚಾರ್ಯ ಪ್ರಾರ್ಥಿಸಿದರು.