ಮಡಿಕೇರಿ, ಜು. 1: ರಂಗ ಸಮುದ್ರ ಬಳಿಯ ಚಿಕ್ಲಿಹೊಳೆ ಪ್ರದೇಶದ ಕುಟ್ಟನಹಳ್ಳಿ ಎಂಬಲ್ಲಿ ರೈತ ನೊಬ್ಬನ ಹಸುವನ್ನು ಹಾಡಹಗಲು ಮೇಯಲು ಬಿಟ್ಟಿದ್ದ ವೇಳೆ, ಧಾಳಿ ನಡೆಸಿ ಕೊಂದು ಹಾಕಿದ್ದ ಹುಲಿರಾಯ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದ್ದಾನೆ.

ಹಸುವಿನ ಮಾಲೀಕ ತಳೂರು ನಾಗರಾಜು ಎಂಬವರು, ತಮ್ಮ ಹಸು ವನ್ನು ಹುಲಿಯು ಕೊಂದು ಹಾಕಿರುವ ಬಗ್ಗೆ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಆ ಮೇರೆಗೆ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ಹುಲಿಯ ಚಲನವಲನ ಗಮನಿಸಲು, ಘಟನೆಯ ಸ್ಥಳದಲ್ಲಿ ರಾತ್ರಿ ವೇಳೆ ಸಿಸಿ ಕ್ಯಾಮರಾ ಅಳವಡಿಸಿದ್ದರು. ಇಂದು ಸಿಸಿ ಕ್ಯಾಮರಾ ಪರಿಶೀಲಿಸಲಾಗಿದೆ. ಆ ವೇಳೆಗೆ ಹುಲಿಯು ಹಸುವಿನ ಕಳೇಬರದ ಬಳಿ ಹೊಂಚು ಹಾಕುತ್ತಾ ಬಂದು, ಸುತ್ತಮುತ್ತ ದಿಟ್ಟಿಸಿ ನೋಡುವದರೊಂದಿಗೆ ಸಾಕಷ್ಟು ಗೋಮಾಂಸ ಭಕ್ಷಿಸಿ ತೆರಳಿರುವ ದೃಶ್ಯ ಗೋಚರಿಸಿದೆ. ಕೆಲವು ದಿನಗಳ ಹಿಂದೆ ಮೀನುಕೊಲ್ಲಿ ವ್ಯಾಪ್ತಿಯ ರೈತರ ದನವನ್ನು ಕೊಂದು ತಿಂದು ಹಾಕಿದ್ದ ಹುಲಿಯೇ ಮತ್ತೆ ತನ್ನ ಧಾಳಿ ಮುಂದುವರೆಸಿ ಇದೀಗ ಚಿಕ್ಲಿಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು, ಕುಟ್ಟನಹಳ್ಳದಲ್ಲಿ ಮತ್ತೊಂದು ಹಸುವನ್ನು ಬಲಿ ಪಡೆದಿರುವದು ದೃಢ ಪಟ್ಟಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.