ಸೋಮವಾರಪೇಟೆ, ಜು. 3: ರಸಪೂರಿ ಮಾವಿನ ಹಣ್ಣನ್ನು ತಿನ್ನುವ ಸಲುವಾಗಿ ಮನೆಯ ಬಾಗಿಲಿಗೇ ಕಾಡಾನೆಗಳು ಬಂದ ಘಟನೆ ಗೌಡಳ್ಳಿ ಸಮೀಪದ ಹಿರಿಕರ ಗ್ರಾಮದಲ್ಲಿ ನಡೆದಿದ್ದು, ಮನೆ ಮಾಲೀಕರು ಜೋರಾಗಿ ಬೊಬ್ಬೆ ಹೊಡೆದು ಕಾಡಾನೆಗಳ ಹಿಂಡನ್ನು ಓಡಿಸಿದ್ದಾರೆ.

ಬೆಳಗ್ಗಿನ ಜಾವ 3.30ರ ಸಮಯದಲ್ಲಿ ಹಿರಿಕರ ಗ್ರಾಮದ ಕೃಷಿಕ ಎಚ್.ಸಿ.ತಿಮ್ಮಯ್ಯ ಅವರ ಮನೆಗೆ ಕಾಡಾನೆಗಳು ಆಗಮಿಸಿದ್ದು, ಮರವನ್ನು ಅಲ್ಲಾಡಿಸಿ ಕೆಳಕ್ಕೆ ಬಿದ್ದ ಕಾಯಿ, ಹಣ್ಣುಗಳನ್ನು ತಿನ್ನುತ್ತಿದ್ದವು. ಈ ಶಬ್ದವನ್ನು ಕೇಳಿದ ಮಾಲೀಕರು ಮನೆಯ ಕಿಟಕಿಯ ಮೂಲಕ ಟಾರ್ಚ್‍ನಿಂದ ಬೆಳಕು ಹರಿಸಿ, ಬೊಬ್ಬೆ ಹೊಡೆದಿದ್ದಾರೆ. ಆಕ್ರೋಶಗೊಂಡ ಕಾಡಾನೆ ಕಾಫಿ ಗಿಡಗಳನ್ನು ಕಿತ್ತೆಸೆದು ಅಲ್ಲಿಂದ ತೆರಳಿದ್ದು, ಎಚ್.ಈ. ರಾಜಪ್ಪ ಎಂಬವರ ಮನೆಯ ಮುಂಭಾಗವಿರುವ ಬಾಳೆಗಿಡಗಳನ್ನು ಮುರಿದು ನಂತರ ಮಾಲಂಬಿ ಮೀಸಲು ಅರಣ್ಯಕ್ಕೆ ತೆರಳಿದೆ. ಇದುವರೆÀಗೆ ಮೀಸಲು ಅರಣ್ಯಗಳಿಂದ ಬರುವ ಕಾಡಾನೆಗಳ ಹಿಂಡು, ಕಾಫಿ ತೋಟಗಳಲ್ಲಿ ಬಾಳೆಗಿಡ, ಹಲಸಿನ ಹಣ್ಣು, ಭತ್ತ ಬೆಳೆಯನ್ನು ತಿಂದು ನಾಶಪಡಿಸಿ ಬೆಳಗ್ಗಿನ ಜಾವ ಕಾಡು ಸೇರಿಕೊಳ್ಳುತ್ತಿದ್ದವು. ನಾಯಿಗಳ ಕಾಟಕ್ಕೆ ಗ್ರಾಮ ಪ್ರವೇಶಿಸುತ್ತಿರಲಿಲ್ಲ. ಈಗ ಮಾವಿನ ಹಣ್ಣಿನ ರುಚಿ ಕಂಡಿರುವ ಕಾಡಾನೆಗಳು ಮನೆಯ ಹತ್ತಿರಕ್ಕೆ ಬರುತ್ತಿರುವದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಗ್ರಾಮದಲ್ಲಿ ಹೆಚ್ಚಿನವರ ಮನೆಯ ಹತ್ತಿರ ಮಾವಿನ ಮರಗಳಿದ್ದು, ಫಸಲು ಕೂಡ ಇದೆ. ಕಾಡಾನೆ ರುಚಿ ಕಂಡಿರುವದರಿಂದ ಪ್ರತಿದಿನ ಬರಬಹುದೆಂಬ ಆತಂಕ ಎದುರಾಗಿದೆ. ಅರಣ್ಯದಂಚಿನಲ್ಲಿ ಕಾಡಾನೆ ಇರಬಹುದೆಂಬ ಆತಂಕದಿಂದ ಕೆಲಸಕ್ಕೆ ತೆರಳಲು ಅನೇಕರು ಭಯಪಡುತ್ತಿದ್ದಾರೆ ಎಂದು ಕೃಷಿಕ ತಿಮ್ಮಯ್ಯ ತಿಳಿಸಿದ್ದಾರೆ.