ಸುಂಟಿಕೊಪ್ಪ, ಜು. 3: ಸಂಘದ ಬೆಳವಣಿಗೆಗೆ ಸದಸ್ಯರಗಳ ನಡುವೆ ಒಗ್ಗಟ್ಟು ಮುಖ್ಯ ಎಂದು ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹೇಳಿದರು.

ಇಲ್ಲಿನ ರಮೇಶ್ ಕಾಂಪ್ಲೆಕ್ಸ್‍ನಲ್ಲಿ ಸುಂಟಿಕೊಪ್ಪ ಹೋಬಳಿ ಕಾರ್ಮಿಕರ ಮತ್ತು ಚಾಲಕರ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಚಾಲಕರು ವಾಹನಗಳ ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು ತಪ್ಪದೆ ವಿಮಾ ಕಂತನ್ನು ಕಟ್ಟುವ ಮೂಲಕ ಮುಂದೆ ಬರಬಹುದಾದ ಅನಾಹುತದಿಂದ ಪಾರಾಗಬಹುದು ದ್ವಿಚಕ್ರ ವಾಹನ ಚಾಲಕರು ತಪ್ಪದೆ ಹೆಲ್ಮೆಟ್ ಧರಿಸಬೇಕೆಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಸಂಘದ ಸದಸ್ಯರುಗಳು ಎಲ್ಲಾ ಹೊಣೆಗಾರಿಕೆಯನ್ನು ಅಧ್ಯಕ್ಷರು ಕಾರ್ಯದರ್ಶಿಯ ಹೆಗಲಿಗೆ ಹಾಕದೆ ಸಂಘಟನೆಯನ್ನು ಬಲಪಡಿಸಲು ಕೈಜೋಡಿಸುವಂತಾಗಬೇಕು ಎಂದರು.

ತಾ.ಪಂ. ಸದಸ್ಯೆ ಒಡಿಯಪ್ಪನ ವಿಮಾಲಾವತಿ ಸಂಘದಲ್ಲಿ ಸದಸ್ಯತ್ವವನ್ನು ಹೆಚ್ಚಿಸುವ ಕೆಲಸ ಆಗಬೇಕು, ಕ್ಷೇಮಾಭಿವೃದ್ಧಿ ನಿಧಿಯಿಂದ ಕಷ್ಟಕಾಲದಲ್ಲಿ ನೆರವು ಸಿಗಲಿದೆ. ವಾಹನ ಚಾಲನೆ ಕಠಿಣ ಕೆಲಸವಾಗಿದ್ದು ಜಾಗರೂಕತೆ ಅಗತ್ಯ ಎಂದು ಹೇಳಿದರು.

ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ್ ರೈ, ಸುಂಟಿಕೊಪ್ಪ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ದಿನು, ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಕಿಟ್ಟಣ ರೈ, ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಅಣ್ಣಾಶರೀಫ್, ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಸಂಚಾಲಕರಾದ ನಾಗರತ್ನ, ಕೊಡಗು ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಸಲಹೆಗಾರರಾದ ಪಿ.ಆರ್. ಸುನಿಲ್ ಕುಮಾರ್, ಸುಂಟಿಕೊಪ್ಪ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಬಿ. ವಿನ್ಸೆಂಟ್ ಇದ್ದರು.

ಆಟೋ ಮಾಲೀಕ ಚಾಲಕರ ಸಂಘದ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.