ವೀರಾಜಪೇಟೆ, ಜು. 3: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕು ನಾಯಿಗಳನ್ನು ರಾತ್ರಿ ವೇಳೆ ರಸ್ತೆಗೆ ಬಿಡುತ್ತಿದ್ದು ಇದರಿಂದ ರಸ್ತೆ ಸಂಚಾರಿಗಳಿಗೆ ತೊಂದರೆಯಾಗುತ್ತಿದೆ. ಬೀದಿ ನಾಯಿಗಳೊಂದಿಗೆ ಈ ಸಾಕು ನಾಯಿಗಳಿರುವದರಿಂದ ಬೀದಿ ನಾಯಿಗಳನ್ನು ಪ್ರತ್ಯೇಕವಾಗಿ ಪತ್ತೆ ಹಚ್ಚಿ ಹಿಡಿಯಲು ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ. ಇದಕ್ಕೆ ಸಾಕು ನಾಯಿಗಳಿಗೆ ಆನ್‍ಲೈನ್ ಲೈಸೆನ್ಸ್ ನೀಡುವದು ಒಳಿತೆಂದು ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ ಸಭೆಗೆ ಸಲಹೆ ನೀಡಿದರು. ಇದರ ಕುರಿತು ಪಟ್ಟಣ ಪಂಚಾಯಿತಿ ಚಿಂತನೆ ನಡೆಸುವದಾಗಿ ಅಧ್ಯಕ್ಷ ಜೀವನ್ ಪ್ರತಿಕ್ರಿಯಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಸರಹದ್ದಿನಲ್ಲಿರುವ ಕೆಲವು ಬಡಾವಣೆಗಳು ಚೆಂಬೆಬೆಳ್ಳೂರು ಹಾಗೂ ಬಿಟ್ಟಂಗಾಲ ಗ್ರಾಮಕ್ಕೆ ಸೇರಿದ್ದೆಂದೂ ತೆರಿಗೆ ಆದಾಯ ಗ್ರಾಮ ಪಂಚಾಯಿತಿಗಳಿಗೆ ಸೇರುತ್ತಿದೆ. ಮೂಲ ಸೌಲಭ್ಯಗಳನ್ನು ಪಟ್ಟಣ ಪಂಚಾಯಿತಿಯಿಂದ ಪಡೆಯಲಾಗುತ್ತಿದೆ. ಇದರಿಂದ ಪಟ್ಟಣ ಪಂಚಾಯಿತಿ ಆದಾಯ ಕುಂಠಿತಗೊಳ್ಳುತ್ತಿದೆ ಇದರ ಕುರಿತು ಸಭೆ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು, ಸುಣ್ಣದ ಬೀದಿಗೆ ಡಾ. ಅಬ್ದುಲ್ ಕಲಾಂ ಎಂದು ನಾಮಕರಣ ಮಾಡಲು ಈ ಹಿಂದೆಯೇ ತೀರ್ಮಾನಿಸಲಾಗಿದ್ದನ್ನು ತಕ್ಷಣ ಜಾರಿಗೊಳಿಸುವಂತೆ ಹಿರಿಯ ಸದಸ್ಯ ಎಸ್.ಹೆಚ್. ಮೊೈನುದ್ದೀನ್ ಸಭೆಯಲ್ಲಿ ಒತ್ತಾಯಿಸಿದರು.

ಅಧ್ಯಕ್ಷ ಇ.ಸಿ. ಜೀವನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪೆರುಂಬಾಡಿಯಲ್ಲಿರುವ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಜಾಗಕ್ಕೆ ಸಿ.ಸಿ. ಕ್ಯಾಮೆರಾ ಅಳವಡಿಸುವಂತೆ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ಇತರರು ಉಪಸ್ಥಿತರಿದ್ದರು.