ಮಡಿಕೇರಿ, ಜು. 3: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಿಂದ ಕಳೆದ ಎರಡು ವರ್ಷದಲ್ಲಿ 94 ಲಕ್ಷ ರೂ. ರಾಜಸ್ವ ಸಂಗ್ರಹವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ.ರೇಷ್ಮ ಹಾಗೂ ಭೂ ವಿಜ್ಞಾನಿ ಕೆ.ಎಸ್. ನಾಗೇಂದ್ರಪ್ಪ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ 8, ಮಡಿಕೇರಿ ತಾಲೂಕಿನ ಎಂಟು ಸ್ಥಳಗಳಲ್ಲಿ ಹಾಗೂ ವೀರಾಜಪೇಟೆ ತಾಲೂಕಿನ ಒಂದು ಭಾಗದಲ್ಲಿ ಒಟ್ಟು 17 ಕಡೆಗಳಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಸದ್ಯ ಮಳೆಗಾಲ ವಾದ್ದರಿಂದ ಡಿಸೆಂಬರ್ ವರೆಗೆ ಮರಳು ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸಾಗಾಣಿಕೆಯನ್ನೂ ನಿಷೇಧಿಸಲಾಗಿದೆ ಎಂದು ಭೂ ವಿಜ್ಞಾನಿ ಕೆ.ಎಸ್. ನಾಗೇಂದ್ರಪ್ಪ ಮಾಹಿತಿ ನೀಡಿದರು.

ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ 209 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅದರಲ್ಲಿ 75 ಪ್ರಕರಣಗಳಿಗೆ ದಂಡ ವಿಧಿಸಿ 16 ಲಕ್ಷ ರೂ. ಸಂಗ್ರಹಿಸಲಾಗಿದೆ. 16 ಪ್ರಕರಣಗಳಿಗೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ 24 ಮರಳು ಗಣಿಗಾರಿಕೆ ಪ್ರಕರಣಗಳಲ್ಲಿ 5.85 ಲಕ್ಷ ಗಣಿಗಾರಿಕೆಗೆ ವಿಧಿಸಿದ ದಂಡವಾಗಿದೆ. 11 ಪ್ರಕರಣಗಳಿಗೆ ಮೊಕದ್ದಮೆ ದಾಖಲಿಸಲಾಗಿದೆ. ಮರಳು ಸಾಗಾಣಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷದಲ್ಲಿ 127 ಪ್ರಕರಣಗಳನ್ನು ದಾಖಲಿಸಲಾಗಿದ್ದು, 21 ಲಕ್ಷದಷ್ಟು ದಂಡ ವಿಧಿಸಲಾಗಿದೆ. 13 ಪ್ರಕರಣ ಗಳಿಗೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷದಲ್ಲಿ 14 ಮರಳು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮರಳು ದಾಸ್ತಾನಿಗೆ ಸಂಬಂಧಪಟ್ಟಂತೆ 7.38 ಲಕ್ಷ ದಂಡ ವಿಧಿಸಲಾಗಿದೆ. ಒಟ್ಟಾರೆ 35 ಲಕ್ಷ ದಷ್ಟು ದಂಡ ವಿಧಿಸಲಾಗಿದ್ದು, 25 ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಭೂ ವಿಜ್ಞಾನಿ ನಾಗೇಂದ್ರಪ್ಪ ತಿಳಿಸಿದರು.