ಚೆಟ್ಟಳ್ಳಿ, ಜು. 3: ಹಳ್ಳಿಯ ಬದುಕಿನಲ್ಲಿ ಮಣ್ಣಿನಲ್ಲಿ ಮಣ್ಣಾಗಿ ಆಡಿ ಬೆಳೆವ ಮಕ್ಕಳೊಂದೆಡೆಯಾದರೆ ಪಟ್ಟಣದಲ್ಲಿ ಮಕ್ಕಳ ಹೈಟೆಕ್ ಬದುಕು. ಅದಕ್ಕಿಂತ ವಿಭಿನ್ನವೆಂಬಂತೆ ದುಬಾರೆ ಆನೆ ಶಿಬಿರದ ಹಾಡಿ ಮಕ್ಕಳ ಬದುಕು...!

ದುಬಾರೆ ಎಂಬ ಅರಣ್ಯದೊಳಗೆ ಸಣ್ಣಪುಟ್ಟ ಗುಡಿಸಲು..., ಅದರೊಳಗೆ ಆಡಿ ಬೆಳೆವ ವiಕ್ಕಳು.., ಮನೆಯ ಸುತ್ತಲೂ ನಿತ್ಯಕಾಣುವ ಆನೆಗಳು. ತಮ್ಮ ಕುಟುಂಬದ ಸದಸ್ಯರಂತೆ ಆನೆಗಳೊಂದಿಗೆ ಭಯವಿಲ್ಲದ ಒಡನಾಟ. ಅಪ್ಪ, ಅಣ್ಣ, ಚಿಕ್ಕಪ್ಪ, ದೊಡ್ಡಪ್ಪಂದಿರು; ಆನೆ ಮೇಲೇರಿ ಆನೆ ಭಾಷೆಯೊಂದಿಗೆ ಆನೆಗಳನ್ನು ಪಳಗಿಸುವ ರೀತಿಯಲ್ಲೇ ಹಾಡಿಯ ಮಕ್ಕಳು ಶಿಬಿರದ ಆನೆಗಳಿಗೆ ಊಟ ತಿನ್ನಿಸುವದು, ಬೆನ್ನ ಮೇಲೇರಿ ಕುಳಿತು ಆನೆ ಭಾಷೆಯಾಡುತ್ತಾ ಸವಾರಿ ಮಾಡುವದು ಸಾಮಾನ್ಯವಾಗಿ ಬಿಟ್ಟಿದೆ.

ನಿತ್ಯವೂ ಬೆಳಿಗ್ಗೆ ಶಿಬಿರದಲ್ಲಿ ಆನೆಗಳನ್ನು ಹೊಳೆಯಲ್ಲಿ ಸ್ನಾನ ಮಾಡಿಸಿ, ಉಪಹಾರ ನೀಡಿ ಮೇಯಲು ಆನೆಗಳನ್ನು ಕಾಡಿಗೆ ಕರೆದೊಯ್ಯುವರು.

ಆನೆ ಮಾವುತ ಹಾಗೂ ಕಾವಾಡಿಗಳು ಕಾಡಿಗೆ ಮೇಯಿಸಲು ಆನೆಯ ಬೆನ್ನ ಮೇಲೇರಿ ತೆರಳಿದರೆ ಅವರ ಮಕ್ಕಳು ಆನೆಗಳ ಮೇಲೇರಿ ತೆರಳುವರು.

ಮಾವುತನೊಬ್ಬನ ಮಗನಾದ ಚಂದು ಎಂಬ ಪುಟ್ಟ ಹುಡುಗ ಆನೆಯ ಮೇಲೇರಿ ಯಾವದೇ ಭಯವಿಲ್ಲದೆ ನಿಂತು ಸಂತೋಷ ಪಡುತಿದ್ದ ದೃಶ್ಯ ಹವ್ಯಾಸಿ ಛಾಯಾಗ್ರಾಹಕ ಹಾಗೂ ಪತ್ರಕರ್ತ ಪುತ್ತರಿರ ಪಪ್ಪುತಿಮ್ಮಯ್ಯ ಅವರ ಕ್ಯಾಮರಾದಲ್ಲಿ ಸೆರೆಯಾದವು.

-ಕರುಣ್ ಕಾಳಯ್ಯ