ಗೋಣಿಕೊಪ್ಪ ವರದಿ, ಜು. 3: ಭತ್ತ ಬೆಳೆಯಲ್ಲಿ ಬ್ರಾಡ್‍ಕಾಸ್ಟ್ ಪದ್ಧತಿ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆದುಕೊಳ್ಳಲು ಅವಕಾಶವಿದೆ ಎಂದು ಕೃಷಿ ಪಂಡಿತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಸಲಹೆ ನೀಡಿದರು.

ಇಲ್ಲಿನ (ನಿ) ಬ್ರಿಗೇಡಿಯರ್ ಮನೆಯಪಂಡ ದೇವಯ್ಯ ಅವರ ಕೃಷಿ ಭೂಮಿಯಲ್ಲಿ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ವೀರಾಜಪೇಟೆ ತಾಲೂಕು ಕೃಷಿ ಇಲಾಖೆ ಆಯೋಜಿಸಿದ್ದ ಬ್ರಾಡ್‍ಕಾಸ್ಟ್ ಕೃಷಿ ಪದ್ಧತಿಯ ಪ್ರಾತ್ಯಕ್ಷಿಕೆಯಲ್ಲಿ ಬ್ರಾಡ್‍ಕಾಸ್ಟ್ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟು ಅವರು ಮಾತನಾಡಿದರು. ಬ್ರಾಡ್‍ಕಾಸ್ಟ್ ಪದ್ಧತಿಯ ಕೃಷಿಯು ಹೆಚ್ಚು ಲಾಭಕರವಾಗಿದೆ. ಇದನ್ನು ಪ್ರತಿಯೊಂದು ರೈತರು ಪ್ರಾಯೋಗಿಕವಾಗಿ ಬೆಳೆಸುವ ಮೂಲಕ ಭತ್ತ ಕೃಷಿಗೆ ಒತ್ತು ನೀಡಬೇಕು ಎಂದರು.

ಸಸಿಮಡಿ ತಯಾರಿಸದೆ ನೇರವಾಗಿ ನಾಟಿಗದ್ದೆಯಲ್ಲಿ ಬಿತ್ತನೆ ಮಾಡುವ ಪದ್ಧತಿಯನ್ನು ಬ್ರಾಡ್‍ಕಾಸ್ಟ್ ಎಂದು ಕರೆಯಲಾಗುತ್ತಿದೆ. ಸಸಿಮಡಿಗಾಗಿ ಬಿತ್ತನೆ ಮಾಡದೆ ನಾಟಿ ಗದ್ದೆಗೆ ನೇರವಾಗಿ ದೂರದ ಅಂತರದಲ್ಲಿ ಭತ್ತದ ಕಾಳು ಬೀಳುವಂತೆ ಬಿತ್ತನೆ ಮಾಡುವ ಮೂಲಕ ಕೃಷಿ ಮಾಡಬಹುದಾಗಿದೆ. ಇದರಿಂದ ಸಸಿಮಡಿ ತಯಾರಿಕೆ, ಪೈರು ಕೀಳುವದು ಹಾಗೂ ನಾಟಿಗಾಗಿ ಖರ್ಚಾಗುತ್ತಿದ್ದ ವೆಚ್ಚ ಕಡಿಮೆಯಾಗಲಿದೆ ಎಂದರು.

ಈ ಸಂದರ್ಭ ಗದ್ದೆಯಲ್ಲಿ ಭತ್ತವನ್ನು ಬ್ರಾಡ್‍ಕಾಸ್ಟ್ ಪದ್ಧತಿಯಲ್ಲಿ ಬಿತ್ತನೆ ಮಾಡುವ ಮೂಲಕ ಕೃಷಿಕರಿಗೆ ಪರಿಚಯ ಮಾಡಿಕೊಟ್ಟರು.

ಈ ಸಂಧರ್ಭ ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್, ವಿಜ್ಞಾನಿ ಡಾ. ವೀರೇಂದ್ರ ಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೀನಾ, ಬೆಳೆಗಾರ (ನಿ) ಬ್ರಿಗೇಡಿಯರ್ ಮನೆಯಪಂಡ ದೇವಯ್ಯ ಉಪಸ್ಥಿತರಿದ್ದರು. ಸ್ಥಳೀಯ ಕೃಷಿಕರು ಉತ್ಸಾಹದಿಂದ ಪಾಲ್ಗೊಂಡರು.