ಮಡಿಕೇರಿ, ಜು. 3: ಮೊನ್ನೆ ದಿನ ನಿಧನರಾದ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ನೀರ್ಕಜೆ ಮಹಾಬಲೇಶ್ವರ ಭಟ್ ಅವರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕ.ಸಾ.ಪ. ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು. ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನಾಚರಣೆ ಮೂಲಕ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸಾಹಿತಿ ಬಾಲಸುಬ್ರಮಣ್ಯ ಕಂಜರ್ಪಣೆ ಅವರು ಮಾತನಾಡಿ, ಶಿಕ್ಷಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಏನೂ ಇಲ್ಲದೆ ಬಂದ ಮಹಾಬಲೇಶ್ವರ ಭಟ್ಟರು ಶಿಕ್ಷಣ, ಸಾಹಿತ್ಯ, ಆಸ್ತಿ, ಜನರ ಒಡನಾಟ, ಬಾಂಧವ್ಯ ಎಲ್ಲವನ್ನು ದುಡಿಮೆಯಿಂದಲೇ ಗಳಿಸಿದವರು.

ಸರಳ ಜೀವಿಯಾಗಿದ್ದ ಅವರು ನಿಷ್ಠುರವಾದಿಗಳು ಆಗಿದ್ದರು. ತಪ್ಪನ್ನು ಸ್ಥಳದಲ್ಲೇ ಪ್ರಶ್ನಿಸುವ ಮನೋಭಾವವುಳ್ಳವರಾಗಿದ್ದರೂ ಅದನ್ನು ಅಲ್ಲಿಗೆ ಮನ್ನಿಸಿ ಬಿಡುವ ಸಾಧು ಜೀವಿಯಾಗಿದ್ದರು ಎಂದು ಹೇಳಿದರು

ಕ.ಸಾ.ಪ. ಜಿಲ್ಲಾಧ್ಯಕ್ಷ ಮಾತನಾಡಿದರು. ಹಿರಿಯ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ, ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ನಿರ್ದೇಶಕಿ ಪರ್ಲಕೋಟಿ ಸುನಿತಾ, ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಬಿ.ಎಸ್. ಜಯಪ್ಪ, ಡಾ. ಶ್ರೀಧರ್ ಹೆಗ್ಗಡೆ, ಶ್ರೀಧರ ಹೂವಲ್ಲಿ, ಸಿರಿಗನ್ನಡ ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಸಂತಾಪ : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಮುಖರ ತುರ್ತು ಸಭೆ ನಡೆಸಿ, ಶ್ರದ್ಧಾಂಜಲಿಯನ್ನು ಮೌನ ಪ್ರಾರ್ಥನೆ ಯೊಂದಿಗೆ ಅರ್ಪಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕೆ.ಪಿ.ಸಿ.ಸಿ. ಪದಾಧಿಕಾರಿ ಟಿ.ಪಿ. ರಮೇಶ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರಸಭೆ ಸದಸ್ಯರುಗಳಾದ ಹೆಚ್.ಎಂ. ನಂದಕುಮಾರ್, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ಡಿಸಿಸಿ ಪದಾಧಿಕಾರಿಗಳಾದ ವಿ.ಪಿ. ಸುರೇಶ್, ಟಿ.ಎಂ. ಅಯ್ಯಪ್ಪ, ಕೆ.ಯು. ರಜಾಕ್, ತೆನ್ನೀರ ಮೈನಾ ಮೊದಲಾದವರು ಭಾಗವಹಿಸಿದ್ದರು.

ಎಸ್‍ಡಿಪಿಐ: ಹಿರಿಯ ಸಾಹಿತಿ ನೀರ್ಕಜೆ ಮಹಾಬಲೇಶ್ವರ ಭಟ್ ಅವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನಗರ ಘಟಕ ಸಂತಾಪ ಸೂಚಿಸಿದೆ. ಭಟ್ ಅವರ ನಿಧನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ನಗರಾಧ್ಯಕ್ಷ ಖಲೀಲ್ ಹೇಳಿದ್ದಾರೆ.