ಸಿದ್ದಾಪುರ, ಜು. 3: ಅನ್ಯಾಯಕ್ಕೊಳಗಾದ ಮಹಿಳೆಯರು ಕಾನೂನಾತ್ಮಕವಾಗಿ ಹೋರಾಡಲು ಮುಂದಾಗದಿದ್ದರೆ ಮಹಿಳಾ ಸಬಲೀಕರಣ ಮರೀಚಿಕೆಯಾದೀತು ಎಂದು ವೀರಾಜಪೇಟೆಯ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಶಿವಾನಂದ ಲಕ್ಷ್ಮಣ ಅಂಚಿ ವಿಷಾದಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಸಿದ್ದಾಪುರದ ಗುಹ್ಯ ಅಗಸ್ತ್ಯೇಸ್ವರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವ ವರ್ತಕರು ನೂತನವಾಗಿ ಜಾರಿಗೆ ಬಂದಿರುವ ಜಿಎಸ್‍ಟಿ ಕಾನೂನಿನ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡು ವ್ಯವಹಾರ ನಡೆಸುವಂತೆ ಈ ಸಂದರ್ಭ ಅವರು ತಿಳಿಹೇಳಿದರು. ವಕೀಲ ಎನ್.ಎಸ್. ಪ್ರಶಾಂತ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದಾಪುರದ ಗುಹ್ಯ ಅಗಸ್ತ್ಯೇಸ್ವರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ವಕೀಲ ಎಂ. ಎಸ್. ವೆಂಕಟೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಲೆಕ್ಕ ಪರಿಶೋಧಕ ಟಿ.ಕೆ. ಶ್ರೀನಿವಾಸ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪಿ.ಎಂ. ರಾಜ್ ಕುಮಾರ್ ಹಾಗೂ ಸಹಕಾರ ಸಂಘದ ನಿರ್ದೇಶಕರು ಹಾಜರಿದ್ದರು.