ನಾಪೆÇೀಕ್ಲು, ಜು. 3: ಸರಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಶಿಕ್ಷಣ ಇಲಾಖೆ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಹೆಚ್ಚಳವೇನು ಆದಂತಿಲ್ಲ. ಆದರೆ ಹಲ್ಲಿದ್ದವರಿಗೆ ಕಡಲೆ ಇಲ್ಲ. ಕಡಲೆ ಇದ್ದವರಿಗೆ ಹಲ್ಲಿಲ್ಲ ಎಂಬ ಗಾದೆ ನಾಪೆÇೀಕ್ಲು ಪದವಿಪೂರ್ವ ಕಾಲೇಜಿನ ಕಾರ್ಯವೈಖರಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಪ್ರಸ್ತುತ ವರ್ಷ ದ್ವಿತೀಯ ಪಿಯುಸಿಯಲ್ಲಿ 84% ಫಲಿತಾಂಶವೂ ಲಭಿಸಿದೆ. ಆದರೂ ಈ ಕಾಲೇಜಿಗೆ ಯಾವದೇ ಮೂಲಭೂತ ಸೌಲಭ್ಯ ನೀಡಿಲ್ಲ ಎಂಬದು ಅಚ್ಚರಿಯ ಸಂಗತಿಯಾಗಿದೆ.
ಕುಸಿಯುವ ಭೀತಿಯಲ್ಲಿ ಕಾಲೇಜು ಕಟ್ಟಡ: 1944ನೇ ಇಸವಿಯಲ್ಲಿ ಇಲ್ಲಿ ದಾನಿಗಳು ನೀಡಿದ 52 ಏಕರೆ ಜಾಗದಲ್ಲಿ ಸರಕಾರಿ ಪ್ರೌಢಶಾಲೆಯನ್ನು ಆರಂಭಿಸಲಾಯಿತು. ನಂತರ 1973ನೇ ಇಸವಿಯಲ್ಲಿ ಅದೇ ಕಟ್ಟಡದಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಲಾಯಿತು. ಇತ್ತೀಚಿನ ವರ್ಷಗಳಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಪ್ರತ್ಯೇಕವಾದ ಹಿನ್ನಲೆಯಲ್ಲಿ ಕೆಲವು ಕಟ್ಟಡಗಳನ್ನು ಪದವಿ ಪೂರ್ವ ಕಾಲೇಜಿನ ಜವಾಬ್ದಾರಿಗೆ ವಹಿಸಲಾಯಿತು. ಆದರೆ ಈ ಕಟ್ಟಡಗಳ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ ಯಾವದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.
ಕಟ್ಟಡದ ಮೇಲ್ಚಾವಣಿ ಹಾನಿಯಾಗಿರುವ ಹಿನ್ನೆಲೆ ಶಾಲಾ ತರಗತಿಗಳು ಸಂಪೂರ್ಣವಾಗಿ ಸೋರುತ್ತಿದ್ದು, ತರಗತಿಯ ಒಳಭಾಗದಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸಾಧ್ಯವಿಲ್ಲದೆ ಬೇರೆ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ ಪ್ರಸಂಗ ನಡೆದಿದೆ.
ಉಳಿದ ತರಗತಿಗಳಲ್ಲಿ ಮಳೆಯ ನೀರು ಗೋಡೆಗೆ ಬೀಳುತ್ತಿದ್ದು, ಗೋಡೆ ಕುಸಿಯುವ ಭೀತಿ ಎದುರಾಗಿದೆ. ಕಾಲೇಜು ಕಟ್ಟಡದ ವೆರಾಂಡದಲ್ಲಿ ಸಂಪೂರ್ಣವಾಗಿ ನೀರು ಸಂಗ್ರಹಗೊಂಡು ಕೆರೆಯಂತಾಗಿದೆ. ಈ ಬಗ್ಗೆ ಪ್ರಾಂಶುಪಾಲರು ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವದೇ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ.
ಶೌಚಾಲಯಕ್ಕೆ ಪರದಾಟ: ಇಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ವಿದ್ಯಾರ್ಥಿನಿಯರು ಪ್ರೌಢಶಾಲೆಯ ಹಳೇ ಶೌಚಾಲಯವನ್ನು ಪ್ರಯಾಸದಿಂದ ಬಳಸುತ್ತಿದ್ದು, ಬಾಲಕರು ಮೂತ್ರ ವಿಸರ್ಜನೆಗೆ ಕಾಡನ್ನು ಅವಲಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆರಂಭಗೊಳ್ಳದ ನೂತನ ಕಟ್ಟಡ ಕಾಮಗಾರಿ: ಕಾಲೇಜು ಕಟ್ಟಡದ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೆಲವು ತಿಂಗಳುಗಳ ಹಿಂದೆ ಶಾಸಕ ಕೆ.ಜಿ.ಬೋಪಯ್ಯ ಸುಮಾರು 55 ಲಕ್ಷ ರೂ.ಗಳ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಆ ಸ್ಥಳದಲ್ಲಿರುವ ಮರಗಳನ್ನು ಕಾಲೇಜು ಆಡಳಿತ ತೆರವುಗೊಳಿಸಿ ಅರಣ್ಯ ಇಲಾಖೆಗೆ ಒಪ್ಪಿಸಬೇಕೆಂದು ತಿಳಿಸಿದ ಕಾರಣ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಕಾಲೇಜಿಗೆ ಯಾವದೇ ಅನುದಾನ ದೊರೆಯದ ಕಾರಣ ಅದನ್ನು ನಮ್ಮಿಂದ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ನಳಂದ.
35 ಲಕ್ಷ ಕಾಡುಪಾಲು: ಕಾಲೇಜಿನ ವಿಜ್ಞಾನ ವಿಭಾಗದ ಶಾಲಾ ಕೊಠಡಿ, ಪ್ರಯೋಗಾಲಯಕ್ಕಾಗಿ ಸರಕಾರದಿಂದ ಲೋಕೋಪಯೋಗಿ ಇಲಾಖೆಯ ಮೂಲಕ 2007ರಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಎರಡಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡವನ್ನು ಕಾಲೇಜಿಗೆ ಹಸ್ತಾಂತರಿಸದ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕಟ್ಟಡದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಕಟ್ಟಡದ ಸುತ್ತ ಗಿಡ, ಗಂಟಿ, ಕಾಡುಗಳು ಬೆಳೆದು ಕಟ್ಟಡವನ್ನು ಕಾಡಿನ ಮಧ್ಯೆ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳಿಗೆ ಅನಾರೋಗ್ಯ: ಕಟ್ಟಡದಲ್ಲಿ ಕಿಟಕಿಗಳಿಲ್ಲದೆ ಗಾಳಿ, ಮಳೆ ತರಗತಿಯೊಳಗೆ ನುಗ್ಗುತ್ತಿದೆ. ಚಾವಣಿ ಹೆಂಚುಗಳು, ಪಕಾಸುಗಳು ಹಾನಿಯಾಗಿರುವ ಕಾರಣ ಮೇಲ್ಭಾಗದಿಂದಲೂ ಮಳೆ ನೀರು ಸುರಿಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಆಗಿದ್ದಾಗ್ಗೆ ಆರೋಗ್ಯ ಹಾಳಾಗುತ್ತಿದ್ದು, ವಿದ್ಯಾರ್ಥಿಗಳ ಹಾಜರಾತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರು.