ಕುಶಾಲನಗರ, ಜು. 3: ಕುಶಾಲನಗರ ವ್ಯಾಪ್ತಿಯಲ್ಲಿ ಕೆರೆ ಒತ್ತುವರಿ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಇನ್ನುಳಿದ ಐತಿಹಾಸಿಕ ಕೆರೆಗಳ ಸಂರಕ್ಷಣೆಗೆ ಜಿಲ್ಲಾಡಳಿತ ಕಾರ್ಯಸೂಚಿ ಹಮ್ಮಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಭೂಮಾಪನಾ ಸಹಾಯಕ ನಿರ್ದೇಶಕ ಷಂಶುದ್ದಿನ್, ಕೆರೆ ಒತ್ತುವರಿ ತೆರವಿಗೆ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೋರೇಷನ್ ಮೂಲಕ ಸಂರಕ್ಷಣೆಗೆ ಯೋಜನೆ ರೂಪಿಸಿದೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತಿ ಗ್ರಾಮ, ಪಟ್ಟಣ, ನಗರಗಳಲ್ಲಿರುವ ಕೆರೆ, ಸರೋವರಗಳನ್ನು ಪತ್ತೆಹಚ್ಚುವದರೊಂದಿಗೆ ಸರ್ವೆ ಕಾರ್ಯ ನಡೆಸಿ ಅಕ್ರಮ ಕಟ್ಟಡಗಳ ತೆರವಿಗೆ ಕಾರ್ಯಾಚರಣೆ ತಂಡ ಸದ್ಯದಲ್ಲಿಯೇ ಕೆಲಸ ನಿರ್ವಹಿಸಲಿದೆ. ಕುಶಾಲನಗರ ಸೇರಿದಂತೆ ಜಿಲ್ಲೆಯ ಕೆರೆ, ಕಟ್ಟೆ ಮತ್ತಿತರ ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿರುವ ಸರಕಾರಿ ಜಾಗಗಳ ಸಂರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಸಭೆ ಮಂಗಳವಾರ ನಡೆದಿದೆ.

ಕುಶಾಲನಗರದ ತಾವರೆಕೆರೆ ಸಂರಕ್ಷಣಾ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಪಟ್ಟಣದಲ್ಲಿರುವ ಇನ್ನಿತರ ಕೆರೆಗಳ ವ್ಯಾಪ್ತಿಯ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಲಾಗುವದು ಎಂದಿದ್ದಾರೆ.

ತಾವರೆಕೆರೆಗೆ ಅಡ್ಡಲಾಗಿ ನಿರ್ಮಿಸಲಾದ ರಸ್ತೆ ತೆರವು ಕಾರ್ಯ ಮುಂದುವರೆದಿದ್ದು 4ನೇ ದಿನವಾದ ಮಂಗಳವಾರ ಕೂಡ ಕಾಮಗಾರಿ ನಡೆದಿದೆ.

ಈ ಕೆರೆಗೆ ಅಕ್ರಮವಾಗಿ ನಿರ್ಮಿಸಲಾಗಿರುವ ಅಂದಾಜು 60 ಅಡಿ ಅಗಲ 4 ಅಡಿ ಎತ್ತರದ ರಸ್ತೆಯನ್ನು ತೆರವುಗೊಳಿಸಿ ಕೆರೆಯ ಸುಸ್ಥಿತಿಯನ್ನು ಕಾಪಾಡಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದರು.