ಮಡಿಕೇರಿ, ಜು. 3: ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗು ವಿಭಿನ್ನ ಭೌಗೋಳಿಕತೆ ಯನ್ನು ಹೊಂದಿರುವದು ಮಾತ್ರವಲ್ಲದೆ ಇದು ಕೃಷಿ ಪ್ರಧಾನವಾದ ಜಿಲ್ಲೆಯಾಗಿದೆ. ಇಲ್ಲಿ ಪ್ರಮುಖವಾಗಿ ಕಾಫಿ ಆರ್ಥಿಕತೆಯ ಬೆನ್ನೆಲುಬಾದರೆ ಇದರೊಂದಿಗೆ ಭತ್ತ, ಏಲಕ್ಕಿ, ಕಿತ್ತಳೆ, ಕರಿಮೆಣಸು ಸೇರಿದಂತೆ ಉಪ ಬೆಳೆಗಳಾದ ಬಾಳೆ, ಶುಂಠಿ, ಅಡಿಕೆ, ಮುಸುಕಿನ ಜೋಳ, ಆಂಥೂರಿಯಂ, ಆರ್ಕಿಡ್‍ನಂತಹ ಪುಷ್ಪ ಕೃಷಿಗಳನ್ನು ಜನತೆ ಬೆಳೆಯುತ್ತಾರೆ. ಕೃಷಿ ಪ್ರಧಾನವಾಗಿರುವ ಜಿಲ್ಲೆಯ ಬಹುತೇಕ ಬೆಳೆಗಳು ನೀರು ಆಧಾರಿತವಾಗಿವೆ. ಆದರೆ, ಜಿಲ್ಲೆಯ ವಾತಾವರಣದ ವಿಭಿನ್ನತೆಗಳು ಬಹುತೇಕ ಬೆಳೆಗಳ ಮೇಲೆ ಒಂದಲ್ಲಾ ಒಂದು ರೀತಿಯ ವಿಭಿನ್ನ ಪರಿಣಾಮಗಳನ್ನು ಬೀರುತ್ತಿವೆ. ಅದರಲ್ಲೂ ಇತ್ತೀಚಿನ ಹಲವು ವರ್ಷಗಳಲ್ಲಿ ಕಂಡು ಬರುತ್ತಿರುವ ವಾತಾವರಣದ ಅಸಹಜತೆಯಿಂದಾಗಿ ಕೆಲವಾರು ಫಸಲುಗಳ ಮೇಲೆ ದುಷ್ಪರಿಣಾಮವೇ ಕಂಡು ಬರುತ್ತಿದೆ.ಈ ಹಿಂದಿನ ವರ್ಷಗಳಲ್ಲಿ ವಿವಿಧ ಋತುಗಳು ಕೃಷಿಕರಿಗೆ ಅರಿವಿತ್ತು. ಯಾವ ಯಾವ ಅವಧಿಯಲ್ಲಿ ಯಾವ ರೀತಿಯ ವಾತಾವರಣವಿರುತ್ತದೆ ಎಂದು ಅನುಭವ ಹೊಂದಿದ್ದ ರೈತರು ಅದಕ್ಕೆ ತಕ್ಕಂತೆ ಆಯಾ ಬೆಳೆಗಳನ್ನು ನಿರ್ವಹಣೆ ಮಾಡುವ ಮೂಲಕ ಬದುಕು ಕಂಡುಕೊಳ್ಳುತ್ತಿದ್ದರು. ಆದರೆ ಪ್ರಸ್ತುತದ ವರ್ಷಗಳಲ್ಲಿ ಕಂಡು ಬರುತ್ತಿರುವ ವಾತಾವರಣ ಹಾಗೂ ಋತುಗಳ ಏರು - ಪೇರಿನಿಂದಾಗಿ ಕೈಗೆ ಬಂದಿದ್ದು, ಬಾಯಿಗೆ ಬರಲಿಲ್ಲ ಎಂಬ ಸ್ಥಿತಿ ಕೃಷಿಕರದ್ದಾಗಿದೆ.ಪ್ರಸಕ್ತ ವರ್ಷವೂ ಮುಂಗಾರು ಮಳೆಯಲ್ಲಿ ಕಂಡು ಬಂದಿರುವ ಅಬ್ಬರ - ಅಸಹಜತೆಗಳಿಂದಾಗಿ ಮುಂದಿನ ಸಾಲಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮಗಳೇ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂಬದು ಅನುಭವಸ್ಥರ ಮಾತು.

ಜೂನ್ ತಿಂಗಳ ಎರಡನೇ ವಾರದಲ್ಲಿ ಆರಂಭಗೊಂಡ ಮುಂಗಾರು ಮಳೆ ಆರಂಭದಲ್ಲೇ ಅಬ್ಬರ ತೋರಿದ ಪರಿಣಾಮ ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಕಾಫಿ ಫಸಲಿಗೆ ವಿಭಿನ್ನ ಪರಿಣಾಮ ಬೀರಲಿದೆ. ಜಿಲ್ಲೆಯ ಕೆಲವೆಡೆಗಳಲ್ಲಿ ಕೆಲವೇ ದಿನಗಳಲ್ಲಿ ಅದರಲ್ಲೂ 3-4 ದಿನಗಳ ಅವಧಿಯಲ್ಲಿ 30 ರಿಂದ 40 ಇಂಚಿನಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ. ಇದು ಆ ವ್ಯಾಪ್ತಿಯಲ್ಲಿ ಸಮಸ್ಯೆಗೆ ಕಾರಣವಾದರೆ ಇನ್ನು ಕೆಲವು ಪ್ರದೇಶಗಳಲ್ಲಿ ವಾರ್ಷಿಕವಾಗಿ ಸುರಿಯುವ ಮಳೆ ಈ ವೇಳೆಗಾಗಲೇ ಬಿದ್ದಿರುವದು ಇನ್ನೊಂದು ರೀತಿಯಲ್ಲಿ ತೊಂದರೆಯಾಗಿದೆ. ಈ ಅಹಿತಕರ ವಾತಾವರಣದಿಂದಾಗಿ ಬೆಳೆಗಾರರಿಗೆ ಸಕಾಲದಲ್ಲಿ ಗೊಬ್ಬರ ಒದಗಿಸಲೂ ಸಾಧ್ಯವಾಗಿಲ್ಲ. ವಿಶೇಷವಾಗಿ ರೋಬಸ್ಟಾ ಕಾಫಿಯಲ್ಲಿ ಕಪ್ಪು ಕೊಳೆತ (ಬ್ಲಾಕ್‍ರಾಟ್) ಮತ್ತು ಕಾಂಡ ಕೊಳೆತ (ಸ್ಟಾಕ್ ರಾಟ್) ಉಲ್ಬಣವಾಗುವ ಸಾಧ್ಯತೆಯಿದೆ. ಇದರಿಂದ ಕಾಫಿ ಉದುರುವಿಕೆ ಹೆಚ್ಚಾಗುವ ಕುರಿತು ಕಾಫಿ ಮಂಡಳಿ ಮುನ್ಸೂಚನೆ ನೀಡಿದ್ದು, ಕೆಲವು ಕ್ರಮಗಳ ಕುರಿತು ಮಾಹಿತಿ ನೀಡಿದೆ. ಸೋಮವಾರಪೇಟೆ ತಾಲೂಕಿನ ಹಲವೆಡೆಗಳಲ್ಲಿ ಈಗಾಗಲೇ ಕಾಫಿ ಕೊಳೆ ರೋಗ ಕಂಡು ಬಂದಿದೆ.

ಮಳೆಯಿಂದ ಕಾಫಿ ಗಿಡದ ಬುಡದಲ್ಲಿ ನೀರು ನಿಲ್ಲುವದರಿಂದ ಗಿಡಗಳು ಉಸಿರಾಡುವದು ಕಷ್ಟ, ಕೊಡಗಿನ ಮಧ್ಯಭಾಗದಲ್ಲಿ ಈಗಾಗಲೇ ವಾರ್ಷಿಕ ಮಳೆಯ

ಶೇ. 60 ರಷ್ಟು

(ಮೊದಲ ಪುಟದಿಂದ) ಪ್ರಮಾಣದ ಮಳೆ ಸುರಿದಿದೆ. ಇದರಿಂದ ಕೊಳೆರೋಗವೂ ಬರಲಿದೆ. ಮಳೆ ಮತ್ತೆ ಮುಂದು ವರಿದಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ. ಇದರೊಂದಿಗೆ ಬೆಲೆ ಕೊರತೆಯೂ ಬೆಳೆಗಾರರಿಗೆ ಸಂಕಷ್ಟವಾಗಲಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಅನುವಭಸ್ಥ ಬೆಳೆಗಾರರಾದ ಬೋಸ್ ಮಂದಣ್ಣ ಹೇಳುತ್ತಾರೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಮಳೆ ಅಧಿಕವಾಗಿರುವದರಿಂದ ಹಾಗೂ ಮರಬಿದ್ದು ಹಾನಿ ಸಂಭವಿಸಿದೆ. ಗಾಳಿಯಿಂದ ರೆಕ್ಕೆಗಳು ಹಾಳಾಗಿರು ವದು, ಎಲೆ ಸುತ್ತು ಸಮಸ್ಯೆ ಹಾಗೂ ಮಣ್ಣು ಕೊಚ್ಚಿರುವದರಿಂದಲೂ ಬೆಳೆಗಾರರಿಗೆ ಸಮಸ್ಯೆಯಾಗಲಿದೆ ಎಂದು ಬೆಳೆಗಾರ ಇಬ್ನಿವಳವಾಡಿ ಪೊನ್ನಚೆಟ್ಟಿರ ಸುರೇಶ್ ಸುಬ್ಬಯ್ಯ ಹೇಳುತ್ತಾರೆ.

ಕರಿಮೆಣಸು: ಕರಿಮೆಣಸು ಬೆಳೆಗೆ ಸಂಬಂಧಿಸಿದಂತೆ ಪ್ರಸ್ತುತ ಧಾರಣೆ ತೀರಾ ಕುಸಿತವಿರುವದು ಬೆಳೆಗಾರರಿಗೆ ಸಮಸ್ಯೆಯಾಗಿದೆ. ಸದ್ಯದ ಮಟ್ಟಿಗೆ ಈಗಿನ ಮಳೆ ಆಶಾದಾಯಕ ಎನಿಸಿದ್ದರೂ ವಾತಾವರಣದ ಏರು ಪೇರಿನಿಂದಾಗಿ ಹಳದಿ ರೋಗ (ವೈರಸ್) ಕಂಡು ಬರುವ ಸಾಧ್ಯತೆ ಇದೆ. ಈ ರೋಗವನ್ನು ನಿಯಂತ್ರಿಸಿ ಗಿಡಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಕನಿಷ್ಟ ಎರಡು, ಮೂರು ವರ್ಷ ಪ್ರಯತ್ನ ನಡೆಸಬೇಕಾಗುತ್ತದೆ ಎಂದು ಬೋಸ್ ಮಂದಣ್ಣ ವಿವರಿಸಿದರು. ಪ್ರಸ್ತುತ ಮಳೆಯಿಂದ ಗಿಡ ಬಾಡಿಲ್ಲ ಆದರೆ ತಿರುಳು ಕಮ್ಮಿ ಕಂಡು ಬರುತ್ತಿದೆ. ಇದರೊಂದಿಗೆ ಗಾಳಿಯಿಂದ ಸಮಸ್ಯೆಯಾಗಿದೆ ಎಂದು ಸುರೇಶ್ ಸುಬ್ಬಯ್ಯ ಹೇಳಿದರು.

ಏಲಕ್ಕಿ : ಹೆಚ್ಚು ಮಳೆಯಿಂದಾಗಿ ಏಲಕ್ಕಿ ಹೂ ಬಿಡುವದು ಕಷ್ಟ ಅಲ್ಲದೆ, ಇದಕ್ಕೂ ಹಳದಿ ರೋಗ ಕಂಡು ಬರಲಿದೆ. ಅಲ್ಲದೆ ಪ್ರಸ್ತುತ ಏಲಕ್ಕಿ ಬೆಳೆಯಲು ಪರಿಣಿತ ಕಾರ್ಮಿಕರ ಕೊರತೆ ಹಾಗೂ ನಿರ್ವಹಣೆಯ ಸಂಕಷ್ಟದಿಂದಾಗಿ ಜಿಲ್ಲೆಯ ಕೃಷಿಕರು ಏಲಕ್ಕಿಯತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲವೆನ್ನಲಾಗಿದೆ.

ಕಿತ್ತಳೆ : ಕೊಡಗಿನಲ್ಲಿ ಕಿತ್ತಳೆ ಬೆಳೆ ಇತ್ತೀಚಿನ ವರ್ಷದಲ್ಲಷ್ಟೆ ಪುನಶ್ಚೇತನ ಕಾಣುತ್ತಿದೆ. ಉತ್ತಮ ಫಸಲಿಗೆ ಅಗತ್ಯ ಸಮಯದಲ್ಲಿ ಸ್ಪ್ರೇ ಅಗತ್ಯ ಆದರೆ ಮಳೆಯಿಂದಾಗಿ ಕೀಟನಾಶಕ ಒದಗಿಸುವದು ಕಷ್ಟವೆನಿಸಲಿದೆ. ಐಐಹೆಚ್‍ಆರ್ ಸಂಸ್ಥೆ ಕಿತ್ತಳೆ ಹಾಗೂ ತರಕಾರಿಗೆ ಸಿಟ್ರಸ್ ಸ್ಪೆಷಲ್ ಎಂಬ ಸಂಶೋಧನೆ ನಡೆಸಿದೆ. ಇದರ ವಿಜ್ಞಾನಿ ಗಣೇಶ್ ಮೂರ್ತಿ ಅವರು ಆರ್ಕಾ ಮೈಕ್ರೋಟಿಯಲ್ ಕನ್ಸಾರ್ಷಿಯಮ್ ಎಂಬ ಅಂಶವನ್ನು ಕಂಡು ಹಿಡಿದಿದ್ದಾರೆ. ಇದನ್ನು ಮಣ್ಣಿಗೆ ಹಾಕಿದರೆ, ರೋಗ ರುಜಿನಗಳು ಬರುವದು ಕಡಿಮೆಯಾಗಲಿದೆ. ಈ ಬಗ್ಗೆ ಈಗಷ್ಟೇ ಮಾಹಿತಿ ಹೊರಬೀಳುತ್ತಿದೆ.

ಭತ್ತ : ಜಿಲ್ಲೆಯ ಮತ್ತೊಂದು ಪ್ರಧಾನ ಬೆಳೆಯಾಗಿರುವ ಭತ್ತಕ್ಕೆ ಮಳೆಗಾಲ ಪ್ರಶಸ್ತವೆನಿಸಿದರೂ ಇತ್ತೀಚೆಗೆ ಸುರಿದ ಭಾರೀ ಮಳೆ ರಭಸದ ನೀರು ಹರಿಯುವಿಕೆ ಯಿಂದಾಗಿ ಗದ್ದೆಗಳಿಗೆ ಸಮಸ್ಯೆ ಯಾಗಿರುವ ಪರಿಸ್ಥಿತಿಯನ್ನು ಹಲವು ಕೃಷಿಕರು ಎದುರಿಸುತ್ತಿದ್ದಾರೆ. ಸೋಮವಾರಪೇಟೆ, ಕುಶಾಲನಗರ ಭಾಗದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತಿದ್ದು, ಈಗಾಗಲೇ ಈ ಕೆಲಸ ಪ್ರಾರಂಭಗೊಂಡಿದೆ. ಬಾಳೆಗಿಡ ಗಳು ಬಿದ್ದಿರುವದು, ಶುಂಠಿ ಬಿತ್ತನೆ ಮಾಡಿದ ಪ್ರದೇಶಗಳಲ್ಲಿ ನೀರು ನಿಲ್ಲುವ ಪರಿಸ್ಥಿತಿಯಿಂದಾಗಿ ಈ ಬೆಳೆಗಳನ್ನು ಬೆಳೆಯಲೂ ರೈತರು ಪ್ರಯಾಸ ಪಡುವಂತಾಗಿದೆ. ತರಕಾರಿ ಬೆಳೆಗಳನ್ನು ರಕ್ಷಿಸಿ ಕೊಳ್ಳಲೂ ಬೆಳೆಗಾರರು ಹೆಚ್ಚು ಮುತುವರ್ಜಿ ತೋರಬೇಕಾಗಿದೆ. ಆಂಥೂರಿಯಂ, ಆರ್ಕಿಡ್‍ನಂತಹ ಪುಷ್ಪ ಕೃಷಿಗೆ ಇದನ್ನು ಪಾಲಿಹೌಸ್‍ನ ಒಳಭಾಗದಲ್ಲಿ ಬೆಳೆಯುವದರಿಂದ ಶೀತ ವಾತಾವರಣ ಉತ್ತಮವೇ ಎನ್ನಬಹುದಾದರೂ ತೀವ್ರತೆ ಹೆಚ್ಚಾದಲ್ಲಿ ಸಮಸ್ಯೆಯಾಗಬಹುದು ಎನ್ನುತ್ತಾರೆ ತಜ್ಞರು.ಕಾಫಿ ಬೆಳೆಗಾರರಿಗೆ ಮಾಹಿತಿ

ಕಾಫಿ ಬೆಳೆಗಾರರಿಗೆ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ ಕೆಲವೊಂದು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ.

ಕಾಫಿ ಪ್ರದೇಶಗಳಾದ ಕರ್ನಾಟಕದ ಚಿಕ್ಕಮಗಳೂರು, ಸಕಲೇಶಪುರ ಮತ್ತು ಕೊಡಗು ಮತ್ತು ಕೇರಳದ ವಯನಾಡಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ಕೆಲವೊಮ್ಮೆ 3-4 ದಿನಗಳ ಅವಧಿಯಲ್ಲಿ 30 ರಿಂದ 40 ಇಂಚಿನಷ್ಟು ಮಳೆ ಬಂದಿರುವದೂ ಇದೆ.

ಹೆಚ್ಚುವರಿ ಮಳೆಯಿಂದಾಗಿ ಕಾಫಿ ಗಿಡದ ಬೇರಿನ ಭಾಗದಲ್ಲಿ ಅತಿಯಾದ ನೀರು ಶೇಖರಣೆಯಾಗುವದರಿಂದ ತಳದಲ್ಲಿ ತೇವಾಂಶ ಹೆಚ್ಚಾಗುವ ಪರಿಸ್ಥಿತಿಯನ್ನು ಉಂಟು ಮಾಡುತ್ತಿದೆ. ಕೆಲವು ದಿನಗಳವರೆಗೆ ಇದೇ ಪರಿಸ್ಥಿತಿಮುಂದುವರಿಯುವ ಸಾಧ್ಯತೆಯಿರುತ್ತದೆ. ಈ ಅಹಿತಕರ ಹವಾಮಾನ ವೈಪರೀತ್ಯದಿಂದಾಗಿ ವಿಶೇಷವಾಗಿ ರೋಬಸ್ಟಾ ಕಾಫಿಗಳಲ್ಲಿ ಕಪ್ಪು ಕೊಳೆತ (ಬ್ಲಾಕ್ ರಾಟ್) ಮತ್ತು ಕಾಂಡ ಕೊಳೆತ (ಸ್ಟಾಕ್ ರಾಟ್) ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಎಲ್ಲಾ ಕಾಫಿ ಬೆಳೆಗಾರರಿಗೆ ಅಕಾಲಿಕ ಹಣ್ಣಿನ ಉದುರುವಿಕೆ ಮತ್ತು ಕಪ್ಪು ಕೊಳೆತ (ಬ್ಲಾಕ್ ರಾಟ್) ಮತ್ತು ಕಾಂಡ ಕೊಳೆತ (ಸ್ಟಾಕ್ ರಾಟ್) ದಿಂದ ಉಂಟಾಗುವ ನಷ್ಟವನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಅಳವಡಿಸಬೇಕೆಂದು ಸಲಹೆ ನೀಡಲಾಗುತ್ತಿದೆ.

ಹೆಚ್ಚುವರಿ ನೀರು ಹರಿದು ಹೋಗಲು ಅನುಕೂಲವಾಗುವಂತೆ ಒಳಚರಂಡಿಯನ್ನು ಮತ್ತು ತೊಟ್ಟಿಲು ಹೊಂಡಗಳನ್ನು ಸ್ವಚ್ಛಗೊಳಿಸಬೇಕು. ಬೇರುಗಳಲ್ಲಿ ಸರಾಗವಾಗಿ ಗಾಳಿಯಾಡಲು ಸಹಾಯಕವಾಗುವಂತಹ ಪ್ರತಿ ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ಗಿಡದ ಕಸ ಕಡ್ಡಿಗಳನ್ನು ರಾಶಿ ಹಾಕಬೇಕು. ಬೇರಿನ ಭಾಗದ ಸುತ್ತ ಪ್ರತಿ ಎಕರೆಗೆ ಒಂದು ಚೀಲದಂತೆ ಯೂರಿಯಾವನ್ನು ಬಳಸಬೇಕು. ಇದು ಬೇರಿನ ಮೂಲ ಚಟುವಟಿಕೆಯನ್ನು ಪ್ರಚೋದಿಸುತ್ತದೆ. ಎಲ್ಲಿಯಾದರೂ ಹಿಂಗಾರು ಸಿಂಪರಣೆ ಪೂರ್ಣಗೊಂಡಿಲ್ಲವಾದಲ್ಲಿ, ಶೇ. 1 ರಷ್ಟು ಬೋರ್ಡೊ ದ್ರಾವಣವನ್ನು 1 ಕೆ.ಜಿ. ಯೂರಿಯಾ, + 750 ಗ್ರಾಂ ಮ್ಯುರೀಯೇಟಾ ಆಫ್ ಪೋಟಾಷ್ (ಎಂಒಪಿ) + 500 ಗ್ರಾಂ ಸತುವಿನ ಸಲ್ಫೇಟ್ + 75 ಮಿಲಿ ಪ್ಲಾನೋಪಿಕ್ಸ್ ಜೊತೆಗೆ ಒಂದು ಬ್ಯಾರೆಲ್ ಮಿಶ್ರಣಗೊಳಿಸಿ ಸಿಂಪರಣೆ ಮಾಡಬೇಕು ಎಂದು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ಪ್ರಕಟಣೆ ತಿಳಿಸಿದೆ.