ಮಡಿಕೇರಿ, ಜು. 3: ವ್ಯಕ್ತಿಯೋರ್ವರನ್ನು ಕೊಲೆಗೈದ ಆರೋಪ ಎದುರಿಸುತ್ತಿದ್ದಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಮೇಕೇರಿ ಗ್ರಾಮದ ಓಡಿಯನ ಚಂಗಪ್ಪ (58) ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದು, ಈತನ ವಿರುದ್ಧ ದೇವಿ ಪ್ರಸಾದ್ ಎಂಬವರನ್ನು ಕೊಲೆ ಗೈದಿರುವ ಆರೋಪವಿತ್ತು. ಪ್ರಕರಣದ ಸಾರಾಂಶ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮೇಕೇರಿ ಗ್ರಾಮದಲ್ಲಿ ಓಡಿಯನ ಟಿಪ್ಪು ಯಾನೆ ರವಿ ಮತ್ತು ಆರೋಪಿ ಓಡಿಯನ ಚಂಗಪ್ಪ ಹಾಗೂ ಕೊಲೆಗೀಡಾದ ಮೃತ ಓಡಿಯನ ದೇವಿಪ್ರಸಾದ್ ಒಂದೇ ಮನೆಯಲ್ಲಿ ವಾಸವಿದ್ದರು. ದಿನಾಂಕ 31.12.2014 ರಂದು ಮೃತನು ಮೂರು ದಿನಗಳ ಹಿಂದೆ ಮಡಿಕೇರಿಗೆಂದು ಹೋದವನು ವಾಪಸ್ಸು ಮನೆಗೆ ಬಾರದೇ ಇದ್ದ ವಿಚಾರದಲ್ಲಿ ವಾಸದ ಮನೆಯ ಅಂಗಳದಲ್ಲಿ ಆರೋಪಿ ಓಡಿಯನ ಚಂಗಪ್ಪ ಈತನು ಮೃತನನ್ನು ಕುರಿತು ಮೂರು ದಿನಗಳಿಂದ ಎಲ್ಲಿಗೆ ಹೋಗಿದೆ ಎಂದು ಕೇಳಿದಾಗ ಮೃತನು ನನ್ನನ್ನು ಕೇಳಲು ನೀನು ಯಾರು ಎಂದು ಕೇಳಿದ್ದರೆನ್ನಲಾಗಿದೆ.
ಇದೇ ವಿಚಾರದಲ್ಲಿ ಆತನೊಂದಿಗೆ ಜಗಳವಾಡಿ ಆರೋಪಿಯು ದೊಣ್ಣೆಯಿಂದ ಮೃತನ ತಲೆ, ಕೈ, ಕಾಲುಗಳಿಗೆ ಸೇರಿದಂತೆ ಶರೀರದ ಭಾಗಗಳಿಗೆ ಹೊಡೆದು ಗಾಯಪಡಿಸಿ, ಕೊಲೆ ಮಾಡಿರುತ್ತಾನೆ. ಈ ಬಗ್ಗೆ ಮಡಿಕೇರಿ
(ಮೊದಲ ಪುಟದಿಂದ) ಗ್ರಾಮಾಂತರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣವನ್ನು ಠಾಣೆಯಲ್ಲಿ ನೋಂದಾಯಿಸಿಕೊಂಡು ತನಿಖೆಯನ್ನು ನಡೆಸಿ ಆರೋಪಿಯ ವಿರುದ್ಧ ಕೊಲೆ ಮಾಡಿದ ಆರೋಪಕ್ಕಾಗಿ ದೋಷಾರೋಪಣಾ ಪತ್ರವನ್ನು ಪೊಲೀಸರು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಇಲ್ಲಿ ನಡೆಸಲಾಗಿದ್ದು, ಆರೋಪಿತನು ಈ ಕೃತ್ಯವನ್ನು ಪೂರ್ವಯೋಜಿತವಲ್ಲದೆ ಎಸಗಿದ್ದು, ಆ ಕೃತ್ಯದಿಂದ ಮೃತನು ಕೊಲೆಗೀಡಾಗಿರುವದು ಸಾಬೀತಾಗಿದೆ. ಇದರಂತೆ ನ್ಯಾಯಾಧೀಶರಾದ ಪವನೇಶ್ ಡಿ. ಇವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ತೀರ್ಪಿನಲ್ಲಿ ಈ ಅಪರಾಧಕ್ಕಾಗಿ 6 ವರ್ಷಗಳ ಕಠಿಣ ಸಜೆ ಮತ್ತು ರೂ. 10 ಸಾವಿರ ದಂಡವನ್ನು ವಿಧಿಸಲಾಗಿದೆ.
ಸರಕಾರದ ಪರವಾಗಿ ಎಂ. ಕೃಷ್ಣವೇಣಿ, ಸರಕಾರಿ ಅಭಿಯೋಜಕರು, 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಇವರು ವಾದ ಮಂಡಿಸಿದ್ದರು.