ಮಡಿಕೇರಿ, ಜು. 3: ದಕ್ಷಿಣ ಗಂಗೆ ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕ ಮಾರ್ಗವಿಲ್ಲದೆ, ಭವಿಷ್ಯದಲ್ಲಿ ತೊಡಕು ಎದುರಾಗುವ ಸಾಧ್ಯತೆಯೊಂದಿಗೆ, ದೇವಾಲಯ ವ್ಯವಸ್ಥಾಪನಾ ಸಮಿತಿ ಬವಣೆಪಡಬೇಕಾದ ಸನ್ನಿವೇಶವಿದೆ. ಇತ್ತೀಚೆಗೆ ಏರ್ಪಡಿಸಿರುವ ಅಷ್ಟಮಂಗಲ ಪ್ರಶ್ನೆಯಲ್ಲಿನ ದೋಷಗಳ ಪರಿಹಾರಕ್ಕೆ ಇಂತಹ ಸಂದಿಗ್ಧ ಸ್ಥಿತಿ ಎದುರಾಗಲಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ತಾ. 4 ರಂದು (ಇಂದು) ಸಭೆ ಕರೆಯಲಾಗಿದೆ.

ಈ ಹಿಂದೆ ಕಾವೇರಿ ನೀರಾವರಿ ನಿಗಮದಿಂದ ಕ್ಷೇತ್ರದ ಅಭಿವೃದ್ಧಿ ಕೈಗೊಂಡಿದ್ದಾಗ, ಪ್ರಸಕ್ತ ಇರುವ ಗುಡಿಗಳು ಹಾಗೂ ದೇವಸನ್ನಿಧಿ ತನಕ ಯಂತ್ರೋಪಕರಣಗಳೊಂದಿಗೆ ವಾಹನಗಳು ಸರಕು ತುಂಬಿಕೊಂಡು ತೆರಳಲು ಅವಕಾಶವಿದ್ದು, ಕೆಲಸ ಸುಗಮವಾಗಿತ್ತು.

ಈಗಿನ ಚಿತ್ರಣ ಬದಲಾಗಿದ್ದು, ತಲಕಾವೇರಿ ಕ್ಷೇತ್ರಕ್ಕೆ ನಿರ್ಮಿಸಿರುವ ಮಹಾದ್ವಾರದ ಬಳಿಯಿಂದ ಅಲ್ಲಲ್ಲಿ ಹಾಸುಗಲ್ಲುಗಳೊಂದಿಗೆ ಮೆಟ್ಟಿಲು ಗಳನ್ನು ನಿರ್ಮಿಸಿದಾಗಿದೆ. ಈ ಮೆಟ್ಟಿಲುಗಳನ್ನು ಹಾದು ಯಾವ ಲಘು ವಾಹನ ಕೂಡ ಕ್ಷೇತ್ರದೊಳಗೆ ತೆರಳಲು ಈಗಿನ ಪರಿಸ್ಥಿತಿಯಲ್ಲಿ ಮಾರ್ಗವೇ ಇಲ್ಲ. ಇನ್ನು ಅಷ್ಟಮಂಗಲ ದಲ್ಲಿ ಕಂಡು ಬಂದಿರುವಂತೆ ಶ್ರೀ ಅಗಸ್ತ್ಯೇಶ್ವರ ಹಾಗೂ ಶ್ರೀ ಗಣಪತಿ ಗುಡಿಗಳ ಪರಿಸರದಲ್ಲಿ ಸಾಕಷ್ಟು ಕೆಲಸ ಕೈಗೊಳ್ಳಬೇಕಿದೆ. ಮುಖ್ಯವಾಗಿ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಈ ಹಿಂದೆ ಭೂಗತಗೊಳಿಸಿರುವ ಕಲ್ಲಿನ ಬಿಂಬವನ್ನು ಹೊರಗೆ ತೆಗೆದು, ಈಗಿರುವ ಪೂಜಾ ಲಿಂಗವನ್ನು ಬಾಲಾಲಯಕ್ಕೆ ಸ್ಥಳಾಂತರಿಸಬೇಕಿದೆ.

ಅಷ್ಟು ಮಾತ್ರವಲ್ಲದೆ ಅಲ್ಲಿರುವ ಹಳೆಯ ನಂದಿ ವಿಗ್ರಹ ಹಾಗೂ ಭೂಗತವಾಗಿರುವ ಬಿಂಬ ಹೊರ ತೆಗೆದು ಅದನ್ನು ಕಾವೇರಿಯ ಕಡಲು ಸೇರುವ ಪೂಂಪ್‍ಹಾರ್‍ನಲ್ಲಿ ವಿಸರ್ಜಿಸಬೇಕೆಂದು ನಿರ್ದೇಶನ ದೊರೆತಿದೆ ಮಾತ್ರವಲ್ಲದೆ, ತುಲಾಸಂಕ್ರಮಣ ಜಾತ್ರೆ ಹಾಗೂ ಇತರ ಪರ್ವ ಕಾಲದಲ್ಲಿ ತಂತ್ರಿಗಳು, ಅರ್ಚಕರು ಉಳಿದುಕೊಳ್ಳುವ ಗೃಹದೊಂದಿಗೆ ಭಂಡಾರವನ್ನು ಇಡಲು ಸುಸಜ್ಜಿತ ಕೊಠಡಿ ನಿರ್ಮಿಸಬೇಕಿದೆ.

ಈಗ ಅಲ್ಲಿ ತೀರಾ ಶಿಥಿಲ ಗೊಂಡು ಬೀಳುವ ಹಂತದಲ್ಲಿರುವ ಹಳೆಯ ಕಟ್ಟಡವನ್ನು ಮೊದಲು ತೆರವು ಗೊಳಿಸಬೇಕಿದೆ. ಇಂತಹ ಕೆಲಸವನ್ನು ಒಂದು ವೇಳೆ ದೇವಾಲಯ ಸಮಿತಿಯು ಕೈಗೊಳ್ಳುವ ತೀರ್ಮಾನ ವಾದರೆ, ಅದಕ್ಕೆ ಪೂರಕ ಕಾಮಗಾರಿ ಗಾಗಿ ಯಾವ ಸಾಮಗ್ರಿಗಳನ್ನು ವಾಹನಗಳಲ್ಲಿ ಕೊಂಡೊಯ್ಯಲು ರಸ್ತೆ ಮಾರ್ಗವಿಲ್ಲ. ಬದಲಾಗಿ ಎಲ್ಲವನ್ನು ಕಾರ್ಮಿಕರನ್ನು ಬಳಸಿಕೊಂಡು ನಿರ್ವಹಿಸುವದು ಅಷ್ಟೊಂದು ಸುಲಭದ ಅಥವಾ ಬೇಗನೇ ಪೊರೈಸಲು ಸಾಧ್ಯವಾಗುವ ಕೆಲಸವಲ್ಲ.

ಹೀಗಾಗಿ ಮುಂದಿನ ತುಲಾ ಸಂಕ್ರಮಣ ಜಾತ್ರೆಗೆ ಮುನ್ನ ಈಗಿನ ಮಳೆಗಾಲದಲ್ಲಿ ಯಾವದೇ ಅಭಿವೃದ್ಧಿ ಕೆಲಸ ಸಾಧ್ಯವಾಗುವ ವಿಶ್ವಾಸವಿಲ್ಲ. ಅಷ್ಟಮಂಗಲ ಪ್ರಶ್ನೆಯಲ್ಲಿ ತಲಕಾವೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಮರ್ಶೆಗೊಂಡು, ಪರಿಹಾರ ಮಾರ್ಗಗಳಿಗೆ ಸೂಚಿಸಿರುವ ಕಾರ್ಯ ಕೂಡ ಕೊಡಗಿನ ಸಂಪ್ರದಾಯದಂತೆ ಕಕ್ಕಡ (ಆಟಿ) ಮಾಸದಲ್ಲಿ ಯಾರೂ ಮಾಡುವಂತಿಲ್ಲ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ಪ್ರಮುಖರು ಹಾಗೂ ತಕ್ಕ ಮುಖ್ಯಸ್ಥರು ಅಷ್ಟಮಂಗಲ ಪ್ರಶ್ನೆಫಲದಂತೆ ಭಂಡಾರ ಇರಿಸಲು ಸೂಕ್ತ ಕೊಠಡಿ, ಮತ್ತಿತರ ಮೂಲ ಸೌಲಭ್ಯ ರೂಪಿಸಲು ಕಾಲಮಿತಿ ತೆಗೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಲಿದೆ.

ಅಧ್ಯಕ್ಷರ ಸ್ಪಷ್ಟನೆ

ಕ್ಷೇತ್ರದ ಅಭಿವೃದ್ಧಿ ಕುರಿತು ‘ಶಕ್ತಿ’ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರ ಬಳಿ ಪ್ರತಿಕ್ರಿಯೆ ಬಯಸಿದಾಗ, ತಾ. 4 ರಂದು ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಒಳಗೊಂಡಂತೆ ಪ್ರಮುಖರ ಸಭೆ ಕರೆದಿರುವದಾಗಿ ಸ್ಪಷ್ಟಪಡಿಸಿದ್ದಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಅಂಶಗಳು ಹಾಗೂ ಅಭಿವೃದ್ಧಿ ಬಗ್ಗೆ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿದ ಬಳಿಕವಷ್ಟೇ ಒಮ್ಮತದ ತೀರ್ಮಾನ ತೆಗೆದುಕೊಳ್ಳುವದಾಗಿ ಮಾಹಿತಿ ನೀಡಿದ್ದಾರೆ.

ತಂತ್ರಿಗಳಿಗೆ ಸಲ್ಲಿಕೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಗೋಚರ ಫಲದೊಂದಿಗೆ, ಕೆಲವು ದೋಷಗಳ ಪರಿಹಾರ ಕುರಿತು ದೈವಜ್ಞರು ಸಲ್ಲಿಸಿರುವ ವರದಿಯನ್ನು ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳಿಗೆ ಸಲ್ಲಿಸಿದ್ದು, ಅವರು ನೀಡಲಿರುವ ಮಾರ್ಗದರ್ಶ ನದಂತೆ ವ್ಯವಸ್ಥಾಪನಾ ಸಮಿತಿಯು ನಡೆದುಕೊಳ್ಳಲಿರುವದಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವದು ಎಂದು ಪ್ರತಿಕ್ರಿಯಿಸಿದ್ದಾರೆ.