ಶನಿವಾರಸಂತೆ, ಜು. 3: ಸ್ಥಳೀಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಉಪನ್ಯಾಸಕ ಇ.ಎಂ. ದಯಾನಂದ್ ಅಧಿಕಾರ ಸ್ವೀಕರಿಸಿದರು. ಕಳೆದ 18 ವರ್ಷಗಳಿಂದ ಸದರಿ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯನಿರ್ವಹಿಸುತ್ತಿದ್ದ ಎಸ್.ಎಂ. ಉಮಾಶಂಕರ್ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದುವ ಸಲುವಾಗಿ ಕಳೆದ 1 ತಿಂಗಳ ಹಿಂದೆಯೇ ವಿದ್ಯಾಸಂಸ್ಥೆ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದರು. ಇದೀಗ ಆಡಳಿತ ಮಂಡಳಿ ಎಸ್.ಎಂ. ಉಮಾಶಂಕರ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ತೆರವಾದ ಹುದ್ದೆಗೆ ಹಿರಿಯ ಉಪನ್ಯಾಸಕ ಇ.ಎಂ. ದಯಾನಂದ್ ಅವರನ್ನು ನೇಮಕ ಮಾಡಿದೆ.

ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ನೂತನ ಪ್ರಾಂಶುಪಾಲರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ಪ್ರಾಂಶುಪಾಲ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಎಸ್.ಎಂ. ಉಮಾಶಂಕರ್ ಮಾತನಾಡಿ, ವಿದ್ಯಾಸಂಸ್ಥೆಯೊಂದರ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಕಾಲೇಜಿನ ಆಧಾರ ಸ್ತಂಭವಾದ ಪ್ರಾಂಶುಪಾಲರು. ಉಪನ್ಯಾಸಕರ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಈ ಕಾಲೇಜಿನ ಉನ್ನತಿಗಾಗಿ ಎಲ್ಲರೂ ಸೇರಿ ಶ್ರಮಿಸಬೇಕೆಂದರು.

ಈ ಸಂದರ್ಭ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎನ್.ಬಿ. ನಾಗಪ್ಪ, ಉಪಾಧ್ಯಕ್ಷ ಎಚ್.ಪಿ. ಶೇಷಾದ್ರಿ, ಗೌರವ ಕಾರ್ಯದರ್ಶಿ ಜಗನ್‍ಪಾಲ್, ನಿರ್ದೇಶಕರಾದ ಮಹಮದ್ ಖಿನ್ನ, ಎಸ್.ಪಿ. ರಾಜು, ರಂಗೂಬಾಯಿ ವಿಠಲರಾವ್, ಎನ್.ಕೆ. ಅಪ್ಪಸ್ವಾಮಿ, ಪುಷ್ಪ ಪೊನ್ನಪ್ಪ,, ಎನ್.ಜಿ. ಅರುಣ್, ಆನಂದ್ ಹಾಗೂ ಉಪನ್ಯಾಸಕರ ವರ್ಗದವರು ಹಾಜರಿದ್ದರು.