*ಗೋಣಿಕೊಪ್ಪಲು, ಜು. 3: ಕೆಲಸಕ್ಕೆ ಹೋಗುತ್ತಿದ್ದ ವೇಳೆ ದಿಢೀರ್ ಎದುರಾದ ಕಾಡಾನೆ ಕಾರ್ಮಿಕ ಮಹಿಳೆ ಮೇಲೆ ಧಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಾಯಮುಡಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಪ್ರೇಮ (50) ಗಾಯಗೊಂಡ ಮಹಿಳೆ.

ಮಾಯಮುಡಿ ಮಡಿಕೆಬೀಡಿನ ಕೋಲುಬಾಣೆಯ ಪ್ರೇಮ ತನ್ನ ಪತಿ ರಾಜು ಅವರೊಂದಿಗೆ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಕೆಲಸಕ್ಕೆ ನಡೆದುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾಫಿ ತೋಟದಿಂದ ಕಾಡಾನೆ ದಿಢೀರನೆ ಎದುರಾಗಿದೆ. ಆನೆ ಕಂಡ ರಾಜು ಓಡಿ ಹೋಗಿ ಧಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಪ್ರೇಮ ಓಡಲಾಗದೆ ಕುಸಿದು ಬಿದ್ದಿದ್ದಾರೆ. ಇದರಿಂದ ಆಕೆಯ ಕಾಲು, ಎದೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಬಂದ ವಾಹನಗಳ ಸದ್ದು ಕೇಳಿದ ಆನೆ ಕೂಡಲೆ ಕಾಫಿ ತೋಟದೊಳಗೆ ನುಗ್ಗಿದೆ. ಇದರಿಂದ ಹೆಚ್ಚಿನ ಅನಾಹುತವಾಗುವದು ತಪ್ಪಿದಂತಾಗಿದೆ.

ಗಾಯಾಳು ಪ್ರೇಮ ಅವರನ್ನು ಸ್ಥಳೀಯ ನಿವಾಸಿ ಪ್ರತಾಪ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಿತಿಮತಿ ಎಸಿಎಫ್ ಶ್ರೀಪತಿ ಹಾಗೂ ಸಿಬ್ಬಂದಿ ವರ್ಗದವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಲಿ ಕಾರ್ಮಿಕರಾಗಿರುವ ಪ್ರೇಮ ಇದೀಗ ಗೋಣಿಕೊಪ್ಪಲಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾರ್ವಜನಿಕರ ಆಕ್ರೋಶ : ಮಾಯಮುಡಿ ಭಾಗದಲ್ಲಿ ಹಾಡ ಹಗಲೇ ಕಾಡಾನೆಗಳ ಹಾವಳಿ ಅತಿಯಾಗಿದ್ದರೂ ಅವುಗಳ ನಿಯಂತ್ರಣಕ್ಕೆ ಅರಣ್ಯಾಧಿಕಾರಿಗಳು ಯಾವದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾಡಾನೆ ಹಾವಳಿಯಿಂದ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ ಎಂದು ಸಾರ್ವಜನಿಕರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಯಮುಡಿ ಬಳಿ ಒಂದು ತಿಂಗಳ ಹಿಂದೆ ಕಾಡಾನೆ ಆಟೋರಿಕ್ಷಾ ಮೇಲೆ ಧಾಳಿ ನಡೆಸಿ ಜಖಂಗೊಳಿಸಿತ್ತು. ಅಲ್ಲದೆ ಬೈಕ್ ಸವಾರರ ಮೇಲೂ ಧಾಳಿ ನಡೆಸಿತ್ತು. ಇದೀಗ ಮತ್ತೆ ಕಾರ್ಮಿಕರ ಮೇಲೆ ಧಾಳಿ ನಡೆಸಿದೆ. ತೋಟದಲ್ಲಿ ಎರಡು ಮೂರು ತಿಂಗಳಿನಿಂದ ತಂಗಿರುವ ಕಾಡಾನೆಗಳನ್ನು ಮರಳಿ ಕಾಡಿಗಟ್ಟಬೇಕು. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸಿ ಮೌನವಾಗುತ್ತಿದ್ದಾರೆÉ ಎಂದು ದೂರಿದ್ದಾರೆ.