ಪೊನ್ನಂಪೇಟೆ, ಜು. 4: ಕೊಡಗಿನ ಕಾಫಿ ಬೆಳೆಗಾರರ, ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಅಮ್ಮತ್ತಿ ನಗರದಲ್ಲಿ ದ.ಕೊಡಗಿನ ವಿವಿಧ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕೆ.ಯು. ಗಣಪತಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಗಂಟೆಗೆ ಜಮಾವಣೆಗೊಂಡ ಪ್ರತಿಭಟನಾ ಕಾರರು ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಆರಂಭಿಸಿದರು. ಕೊಡಗಿನ ವಾಣಿಜ್ಯ ಬೆಳೆಯಾದ ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸು ತ್ತಿರುವ ಬಗ್ಗೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಹಾಗೂ ಬಿಜೆಪಿ ಪ್ರಮುಖ ಮೂಕೊಂಡ ಬೋಸ್ ದೇವಯ್ಯ ಅವರು ಕೊಡಗಿನ ಕಾಫಿ ಬೆಳೆಗಾರರ ಹಿತವನ್ನು ಕಾಪಾಡಲು ಮುಂದೆ ನಡೆಯುವ ಮುಂಗಡ ಪತ್ರದಲ್ಲಿ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇದೀಗ ಹೋರಾಟ ಸಾಂಕೇತಿಕವಾಗಿ ಆರಂಭವಾಗಿದೆ. ಸಾಲ ಮನ್ನಾ ವಿಚಾರದಲ್ಲಿ ಕಾಫಿ ಬೆಳೆಗಾರರಿಗೆ ಅನ್ಯಾಯವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವದು ಎಂದ ಅವರು ದ.ಕೊಡಗಿನ ವಿವಿಧ ಭಾಗದಲ್ಲಿ ಕಳ್ಳಕಾಕರು ಹೆಚ್ಚಾಗಿದ್ದಾರೆ. ಪಟ್ಟಣದಲ್ಲಿ ಕೋವಿ ಕಳ್ಳತನ ನಡೆದು ಆರು ತಿಂಗಳು
(ಮೊದಲ ಪುಟದಿಂದ) ಕಳೆದರೂ ಕಳ್ಳರನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರು ಯಶಸ್ವಿ ಯಾಗಿಲ್ಲ. ಇವರನ್ನು ಸದೆ ಬಡಿಯುವ ಕೆಲಸದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯಗೊಂಡಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆಯಲ್ಲಿ ಭಷ್ಟಾಚಾರಕ್ಕೆ ಮಿತಿ ಇಲ್ಲದಂತಾಗಿದೆ. ಒಂದು ಕಡತವನ್ನು ವಿಲೇವಾರಿ ಮಾಡಲು ಇಂತಿಷ್ಟು ಹಣ ನೀಡುವಂತೆ ಒತ್ತಾಯಿಸುತ್ತಾರೆ. ಹಣ ನೀಡದೇ ಇರುವವರ ಕಡತಗಳು ಹಾಗೆಯೇ ಉಳಿದಿವೆ. ಇವುಗಳ ವಿರುದ್ದ ಮುಂದೆ ಧ್ವನಿ ಎತ್ತುತ್ತೇವೆ ಎಂದರು.
ಮುಖಂಡರಾದ ಮಚ್ಚಾರಂಡ ಮಣಿ ಕಾರ್ಯಪ್ಪ ಮಾತನಾಡಿ ಸಾಲ ಬಾಧೆಯಿಂದ ರೈತ ಕಂಗಾಲಾಗಿದ್ದಾನೆ ಸಾಲದಿಂದ ರೈತನ ಭೂಮಿ, ತೋಟಗಳು ಹರಾಜು ಹಾಕುವ ಸಂದರ್ಭ ತೊಂದರೆಯಲ್ಲಿರುವ ರೈತನ ಸಂಕಷ್ಟಕ್ಕೆ ಕೈ ಜೋಡಿಸಬೇಕು ಯಾವದೇ ಕಾರಣಕ್ಕೂ ಹರಾಜು ಪ್ರಕ್ರಿಯೆಯಲ್ಲಿ ರೈತರು, ಬೆಳೆಗಾರರು ಭಾಗಿಗಳಾಗಬಾರದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ನೂತನವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ರೈತ ಸ್ನೇಹಿ ಮುಖ್ಯಮಂತ್ರಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿಯವರು ರಾಜ್ಯದ ರೈತ ಮುಖಂಡರೊಂದಿಗೆ ಸಂಪೂರ್ಣ ಕೃಷಿ ಸಾಲ ಮನ್ನಾ ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆ. ಈ ಸಂದರ್ಭ ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಚರ್ಚೆ ನಡೆದಿದೆ. ಸಾಲ ಮನ್ನಾ ಮಾಡುವ ಭರವಸೆಯು ನೀಡಿದ್ದಾರೆ. ಮುಂದಿನ ಮುಂಗಡ ಪತ್ರ ಮಂಡಿಸುವ ಸಂದರ್ಭ ಕಾಫಿ ಬೆಳೆಗಾರರ ಸಾಲ ಮನ್ನಾ ಆಗಲೇಬೇಕು ಇಲ್ಲದಿದ್ದಲ್ಲಿ ಹೋರಾಟ ಉಗ್ರ ರೂಪ ತಾಳಲಿದೆ ಎಂದ ಅವರು ಕೊಡಗಿನ ಅರಣ್ಯ ಅಧಿಕಾರಿಗಳಾದ ಸಿಸಿಎಫ್‍ರವರು ರೈತ ವಿರೋಧಿ ಅಧಿಕಾರಿಯಾಗಿದ್ದಾರೆ. ಇವರಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆನೆ ಮಾನವ ಸಂಘರ್ಷ, ಹುಲಿ ದಾಳಿಯಿಂದ ಸಾಕಷ್ಟು ರೈತರು ನೊಂದಿದ್ದರು. ಇವರ ಪರ ಸರ್ಕಾರಕ್ಕೆ ವರದಿ ಮಾಡುವಲ್ಲಿ ಸತತವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಹಲವು ಮುಖಂಡರು ಮಾತನಾಡಿದರು.
ಅಮ್ಮತ್ತಿ ರೈತ ಸಂಘದ ಕಾರ್ಯದರ್ಶಿ ಎಂ.ಜಿ. ಪೊನ್ನಪ್ಪ. ಸಂಚಾಲಕರಾದ ಕೇಚಂಡ ಕುಶಾಲಪ್ಪ, ಖಜಾಂಜಿ, ಪಿ.ಬಿ. ಅರುಣ್, ಜಂಟಿ ಕಾರ್ಯದರ್ಶಿ ಎಂ.ಸಿ.ವಿಜಯ, ಕಾನೂನು ಸಲಹೆಗಾರರಾದ ಬಿದ್ದಂಡ ಸುಬ್ಬಯ್ಯ ರಾಜ್ಯ ರೈತ ಸಂಘದ ಕೊಡಗು ಘಟಕದ ಸಂಚಾಲಕರಾದ ಚಿಮ್ಮಂಗಡ ಗಣೇಶ್, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಮುಖಂಡರಾದ ಪುಚ್ಚಿಮಾಡ ಸುಭಾಶ್, ಸುರೇಶ್,ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಸುವಿನ್ ಗಣಪತಿ, ಮುಕ್ಕಾಟಿರ ಮಿಕ್ಕಿ, ಪಟ್ಟಡ ಅರುಣ್, ಆರ್‍ಎಂಸಿ ಮಾಜಿ ಅಧ್ಯಕ್ಷ ವಸಂತ್, ಮದ್ರಿರ ಗಣೇಶ್, ಕೊಂಗಂಡ ಪ್ರಶಾಂತ್, ಮುಂತಾದವರು ಭಾಗವಹಿಸಿದ್ದರು. ವೀರಾಜಪೇಟೆ ಸಿಪಿಐ ಕುಮಾರ್ ಆರಾಧ್ಯ ಸಮ್ಮುಖದಲ್ಲಿ ಪೊನ್ನಂಪೇಟೆ, ಗೋಣಿಕೊಪ್ಪ, ಶ್ರೀಮಂಗಲ, ವೀರಾಜಪೇಟೆ ಗ್ರಾಮೀಣ ಠಾಣೆಯ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರತಿಭಟನೆಯಿಂದಾಗಿ ಒಂದು ಗಂಟೆಯ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.