ಆಲೂರುಸಿದ್ದಾಪುರ/ಒಡೆಯನಪುರ, ಜು. 4 : ಸೋಮವಾರಪೇಟೆ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಲೂರುಸಿದ್ದಾಪುರದಲ್ಲಿ ನಡೆಸುವ ಕುರಿತು ಆಲೂರುಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ಲೋಕೇಶ್ಸಾಗರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿ.ಎಸ್.ಲೋಕೇಶ್ಸಾಗರ್-ಗ್ರಾಮೀಣ ಪ್ರದೇಶಗಳಲ್ಲೂ ಕನ್ನಡಕಂಪು ಪಸರಿಸಬೇಕೆಂಬ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಸಮ್ಮೇಳಗಳನ್ನು ನಡೆಸುತ್ತದೆ. ಮುಂದಿನ ದಿನದಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳವನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು. ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಲೂರುಸಿದ್ದಾಪುರದಲ್ಲಿ ನಡೆಸಲು ಜಿಲ್ಲಾ ಕಸಾಪ ತೀರ್ಮಾನಿಸಿದ್ದು, ಸಮ್ಮೇಳನ ಯಶಸ್ಸಿಗೆ ಸ್ಥಳೀಯ ಗ್ರಾ.ಪಂ., ಶಿಕ್ಷಣ ಸಂಸ್ಥೆ, ಸ್ಥಳೀಯ ಪ್ರಮುಖರು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಲಹೆ ಸಹಕಾರ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಗುತ್ತಿದೆ. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನವನ್ನು ಇದೇ ಜುಲೈ ಮಾಸಂತ್ಯದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. ಸಮ್ಮೇಳನವನ್ನು ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಸುವಂತೆಯೂ ತೀರ್ಮಾನಿಸಲಾಯಿತು. ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸುವಂತೆ ತೀರ್ಮಾನಿಸಲಾಯಿತು, ಸಮ್ಮೇಳನ ಅಂಗವಾಗಿ ಆಲೂರುಸಿದ್ದಾಪುರದಲ್ಲಿ ವೇದಿಕೆ ಪ್ರವೇಶದ್ವಾರ ಸೇರಿದಂತೆ ಒಟ್ಟು 5 ದ್ವಾರಗಳನ್ನು ನಿರ್ಮಿಸುವಂತೆಯೂ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಗತ, ಆರ್ಥಿಕ, ಆಹಾರ, ವೇದಿಕೆ, ಮೆರವಣಿಗೆ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಮತ್ತು ಪಿಡಿಓ ಅವರುಗಳು ಸಮ್ಮೇಳನದ ಯಶಸ್ಸಿಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು. ಈ ಸಂದರ್ಭ ಸಮ್ಮೇಳನಕ್ಕೆ 6 ಲಕ್ಷ ರೂ. ವೆಚ್ಚವಾಗಬಹುದೆಂಬ ಅಂದಾಜು ಬಜೆಟನ್ನು ಮಂಡಿಸಲಾಯಿತು.
ಪೂರ್ವಭಾವಿ ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ್ ಸಮ್ಮೇಳನದ ಯಶಸ್ವಿಗೆ ಸ್ಥಳೀಯರ ಸಹಕಾರ ನೀಡುವಂತೆ ಮನವಿ ಮಾಡಿದರು. ಜಿಲ್ಲಾ ಕಸಾಪ ಕೋಶಾಧಿಕಾರಿ ಎಸ್.ಎ. ಮುರುಳೀಧರ್, ಕಸಾಪ ಮಾಜಿ ಅಧ್ಯಕ್ಷ ಜವರಪ್ಪ, ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿದರು. ಪೂರ್ವಭಾವಿ ಸಭೆಯಲ್ಲಿ ಆಲೂರುಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಪ್ರೇಮ, ಆಲೂರುಸಿದ್ದಾಪುರ ಗ್ರಾ.ಪಂ. ಪಿಡಿಓ ಚಂದ್ರೇಗೌಡ, ಮಾಜಿ ತಾ.ಪಂ.ಸದಸ್ಯ ಸಿ.ಕೆ.ಚಂದ್ರಶೇಖರ್, ಸ್ಥಳೀಯ ಹಿರಿಯ ಮುಖಂಡ ಕೆ.ಬಿ.ಬೋಜಪ್ಪ, ಮೊರಾರ್ಜಿ ವಸತಿ ಶಾಲೆ ಮುಖ್ಯಸ್ಥೆ ಕೆ.ಎನ್.ಭಾರತಿ, ಹೋಬಳಿ ಕಸಾಪ ಅಧ್ಯಕ್ಷ ಸಿ.ಎಂ.ಪುಟ್ಟಸ್ವಾಮಿ, ಡಿ.ಬಿ.ಸೋಮಪ್ಪ, ಪ್ರಮುಖರಾದ ಎಚ್.ಎಸ್.ಪ್ರೇಮ್ನಾಥ್, ತಾಲೂಕು ಮತ್ತು ಹೋಬಳಿ ಶಾಖೆ ಕಸಾಪ ಪದಾಧಿಕಾರಿಗಳು, ಸ್ಥಳೀಯ ಸಂಘ-ಸಂಸ್ಥೆಗಳ ಪ್ರಮುಖರು, ವಿವಿಧ ಕ್ಲಸ್ಟರ್ಗಳ ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.