ಮಡಿಕೇರಿ, ಜು. 4: ಸರ್ಕಾರದ ವಿವಿಧ ಇಲಾಖೆಗಳ ಕಚೇರಿಯಲ್ಲಿ ತ್ವರಿತ ಕೆಲಸಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸರ್ಕಾರವು ಸಿದ್ಧಪಡಿಸಿರುವ ಇ-ಕಚೇರಿ ತಂತ್ರಾಂಶದ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇ-ಕಚೇರಿ ತಂತ್ರಾಂಶ ಕುರಿತು ನಡೆದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಇ-ಕಚೇರಿ ತಂತ್ರಾಶದಿಂದ ಕಚೇರಿ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲವಾಗಲಿದೆ. ಜೊತೆಗೆ ಸಿಬ್ಬಂದಿಗಳು ಈ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಿಬ್ಬಂದಿಗಳಿಗೆ ಇ-ಕಚೇರಿ ತಂತ್ರಾಂಶದ ಬಗ್ಗೆ ಮುಖ್ಯ ತರಬೇತುದಾರರಾದ ಲಕ್ಮೀಶ ಅವರು ಮಾಹಿತಿ ನೀಡಿ ಇಂದಿನ ಶರವೇಗದ ಬದುಕಿನಲ್ಲಿ ಸಕಾಲದಲ್ಲಿ ಸಾರ್ವಜನಿಕ ಸೇವೆಯನ್ನು ಕಲ್ಪಿಸುವದು, ಸರ್ಕಾರದ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಇ-ಕಚೇರಿ ತಂತ್ರಾಂಶವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಮಾಹಿತಿ, ಸೌಲಭ್ಯಗಳನ್ನು ಕಲ್ಪಿಸುವಂತಾಗಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಅಜಿತ್ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಇತರರು ಇದ್ದರು.