ಕೂಡಿಗೆ, ಜು. 4: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿರವಿ ಅಧ್ಯಕ್ಷತೆಯಲ್ಲಿ ಮಾರುಕಟ್ಟೆಯಲ್ಲಿ ನಡೆಯಿತು.
2018-19ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆ ತಯಾರಿಸಲಾಯಿತು ಹಾಗೂ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಮತ್ತು ವಸತಿ ರಹಿತರ ಪಟ್ಟಿಯನ್ನು ಓದಿ ಅಂಗೀಕರಿಸಲಾಯಿತು.
ಸಭೆಯಲ್ಲಿ ರುದ್ರಭೂಮಿಗೆ ಹಾಗೂ ಸಾರ್ವಜನಿಕರು ಬಟ್ಟೆ ತೊಳೆಯಲು ಹಾರಂಗಿ ನದಿಗೆ ತೆರಳುವ ದಾರಿಯು ಒತ್ತುವರಿಯಾಗಿದ್ದು, ಅದೇ ದಾರಿಯಲ್ಲಿ ಮದ್ಯದಂಗಡಿಯನ್ನು ತೆರೆದಿರುವ ವಿಚಾರವಾಗಿ ಗ್ರಾಮಸ್ಥರಾದ ಮಂಜುನಾಥ್, ನಂಜಪ್ಪ, ಮಂಜ, ಗಿರೀಶ್, ಗಣೇಶ್ ಪ್ರಸ್ತಾಪಿಸಿದರು. ಒತ್ತುವರಿ ಜಾಗದ ವಿಚಾರವಾಗಿ ಅನೇಕ ಬಾರಿ ಗ್ರಾಮ ಪಂಚಾಯಿತಿಗೂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೂಡಾ ಇದರ ಬಗ್ಗೆ ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೆರೆಗಳು ಒತ್ತುವರಿಯಾಗಿ ಎರಡು ಬಾರಿ ಸರ್ವೆ ನಡೆಸಿದರೂ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಸಚಿನ್ ಅವರನ್ನು ತರಾಟೆಗೆ ತೆಗೆದುಕೊಂಡರು.
94 ಅರ್ಜಿಗಳನ್ನು ಸಮರ್ಪಕ ವಾಗಿ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಆಹಾರ ಇಲಾಖೆಗೆ ಸಂಬಂಧ ಪಟ್ಟಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಸ್ತುಗಳಿಗೆ ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಾಗೂ ಪಡಿತರ ವಸ್ತುಗಳನ್ನು ಎರಡು ದಿನಗಳಲ್ಲೇ ಖಾಲಿ ಮಾಡಿ, ಪಡಿತರ ವಸ್ತುಗಳನ್ನು ಪಡೆಯಲು ಬಂದ ಅರ್ಹ ಫಲಾನುಭವಿಗಳಿಗೆ ಪಡಿತರ ವಸ್ತುಗಳು ಖಾಲಿಯಾಗಿದೆ ಎಂಬ ಉತ್ತರ ನೀಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಮೇಲೆ ಸರಿಯಾದ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಆಹಾರ ನಿರೀಕ್ಷಕ ರಾಜಣ್ಣ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸ್ಥಳೀಯ ಖಾಸಗಿ ಶಾಲೆಗಳಲ್ಲಿ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸದಸ್ಯ ಮಹೇಶ್‍ಕಾಳಪ್ಪ ನೇರವಾಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಈ ವಿಷಯವಾಗಿ ಚರ್ಚಿ ಸುತ್ತಾ, ಇಲಾಖೆಯ ನಿಯಮ ವನ್ನು ಗಾಳಿಗೆ ತೂರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅರ್ಹ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳದೆ ಮನ ಬಂದಂತೆ ಶಿಕ್ಷಕರ ನೇಮಕ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವದರಲ್ಲಿ ವಿಫಲ ರಾಗುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಶಿಕ್ಷಣ ಸಂಯೋಜಕ ಜಗದೀಶ್ ಅವರನ್ನು ಒತ್ತಾಯಿಸಿದರು. ಈ ವಿಷಯವಾಗಿ ಉತ್ತರಿಸಿದ ಜಗದೀಶ್ ಅವರು, ಶಿಕ್ಷಣ ಇಲಾಖೆ ಯ ನಿಯಮದಂತೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾ ಕಾಲೋನಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಸಮರ್ಪಕವಾಗಿ ಕಳೆದ ನಾಲ್ಕು ವರ್ಷಗಳಿಂದ ರಸ್ತೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಹಿಂದೇಟು ಹಾಕುತ್ತಿದೆ ಎಂದು ಆ ವ್ಯಾಪ್ತಿಯ ಸಾರ್ವಜನಿಕರು ಆರೋಪಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೆಬ್ಬಾಲೆ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ವತಿಯಿಂದ ಕೂಡುಮಂಗಳೂರು ವ್ಯಾಪ್ತಿಯಲ್ಲಿ ನಿರ್ಮಿಸಿರುವ ಬೃಹತ್ ಟ್ಯಾಂಕುಗಳಿಗೆ ನೀರು ಸರಬರಾಜು ಮಾಡಿ ಉಪಗ್ರಾಮಗಳಿಗೆ ಸರಬರಾಜು ಮಾಡುವಂತೆ ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾತನಾಡಿ, ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈಗಾಗಲೇ ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗಿದ್ದು, ಯಶಸ್ವಿಯಾಗಿ ಕಾಮಗಾರಿ ನಿರ್ವಹಿಸುವದಾಗಿ ತಿಳಿಸಿದರು.
ಅಭಿವೃದ್ಧಿ ಅಧಿಕಾರಿ ಆಯೆಷಾ ಅವರು ಸರಕಾರದ ವಿವಿಧ ಯೋಜನೆಗಳ ಮಾಹಿತಿಗಳನ್ನು ಸಭೆಗೆ ತಿಳಿಸಿದರು.
ನೋಡಲ್ ಅಧಿಕಾರಿಯಾದ ತೋಟಗಾರಿಕಾ ಇಲಾಖೆಯ ಅಧಿಕಾರಿ ಕಾವ್ಯ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ವಿ. ಸಣ್ಣಪ್ಪ ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ಇದ್ದರು.