ವಾಟ್ಸ್ಆಪ್ನಲ್ಲಿ ಸೆಟ್ಟಿಂಗ್ಸ್ ಬದಲು
ನವದೆಹಲಿ, ಜು. 4: ವಾಟ್ಸ್ಆಪ್ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹೆಚ್ಚಾಗುತ್ತಿದ್ದ ಹತ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಎಚ್ಚರಿಕೆ ಹಿನ್ನೆಲೆ ಸೆಟ್ಟಿಂಗ್ಸ್ ಬದಲಾಯಿಸುವದಾಗಿ ವಾಟ್ಸ್ಆಪ್ ಪ್ರತಿಕ್ರಿಯೆ ನೀಡಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ವಾಟ್ಸ್ಆಪ್ನಲ್ಲಿ ಪ್ರಚೋದನಾಕಾರಿ ಸಂದೇಶಗಳು ಹಿಂಸಾಚಾರಕ್ಕೆ ಕಾರಣವಾಗುತ್ತಿದ್ದು, ಈ ಸಂಬಂಧ ನಿನ್ನೆ ವಾಟ್ಸಾಆಪ್ಗೆ ನೋಟಿಸ್ ಕಳುಹಿಸಲಾಗಿತ್ತು ಎಂದು ಪ್ರಸಾದ್ ಹೇಳಿದ್ದಾರೆ. ಈ ಮಧ್ಯೆ ವಾಟ್ಸ್ಆಪ್, ಟ್ವಿಟರ್, ಫೇಸ್ಬುಕ್, ಜವಾಬ್ದಾರಿಯುತ, ಜಾಗರೂಕತೆಯಿಂದ ಕಾರ್ಯನಿರ್ವಹಿಸುವದನ್ನು ಸ್ವಾಗತಿಸುವದಾಗಿ ಅವರು ತಿಳಿಸಿದ್ದಾರೆ. ಇಂತಹ ಸಂದೇಶಗಳನ್ನು ಯಾರು ಕಳುಹಿಸುತ್ತಿದ್ದಾರೆ ಎಂಬದನ್ನು ಗುಂಪಿನ ನಿರ್ವಾಹಕರು ನಿರ್ಧರಿಸುವಲ್ಲಿ ಅನುಕೂಲ ವಾಗುವಂತಹ ಸೆಟ್ಟಿಂಗ್ ಅನ್ನು ಪ್ರಾರಂಭಿಸಿರುವದಾಗಿ ಕ್ಯಾಲಿಪೆÇೀರ್ನಿಯಾ ದಿಂದ ವಾಟ್ಸ್ಆಪ್ ಕಳುಹಿಸಿದೆ. ಸಂದೇಶಗಳನ್ನು ಓದದೇ ಅರ್ಥ ಮಾಡಿಕೊಳ್ಳದೆ ಮತ್ತೊಬ್ಬರಿಗೆ ಪಾರ್ವಡ್ ಮಾಡಲು ಕಷ್ಟಸಾಧ್ಯವಾದಂತಹ ಪ್ರಯತ್ನವನ್ನು ಮಾಡಲಾಗುತ್ತಿರುವದಾಗಿ ವಾಟ್ಸ್ಆಪ್ ತಿಳಿಸಿದೆ. ಇಂತಹ ಕ್ರಮವನ್ನು ಶ್ಲಾಘಿಸುವದಾಗಿ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಪಟಾಕಿ ದುರಂತದಲ್ಲಿ 11 ಸಾವು
ತೆಲಂಗಾಣ, ಜು. 4: ತೆಲಂಗಾಣ ವರಂಗಲ್ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 11 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತೆಲಂಗಾಣದ ಕೋಟಿ ಲಿಂಗಗಳ ದೇವಾಲಯದ ಬಳಿಯಿರುವ ಪಟಾಕಿ ಕಾರ್ಖಾನೆಗೆ ಇದ್ದಕ್ಕಿದ್ದಂತೆ ಬೆಂಕಿ ಬಿದ್ದ ಪರಿಣಾಮ ಕಾರ್ಖಾನೆಯ 11 ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಅಗ್ನಿ ಅವಘಡ ಸಂಭವಿಸಿದ ಸಂದರ್ಭ ಕಾರ್ಖಾನೆಯಲ್ಲಿ 15 ಮಂದಿ ಇದ್ದರು ಎಂದು ಪೆÇಲೀಸರು ಹೇಳಿದ್ದಾರೆ. ಬೆಂಕಿ ಕಾಣಿಸುವದಕ್ಕೂ ಮುನ್ನ ಕಾರ್ಖಾನೆಯಲ್ಲಿ ದೊಡ್ಡ ಸ್ಫೋಟದ ಶಬ್ಧ ಕೇಳಿ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದು, ಗಾಯಾಳುಗಳನ್ನು ವರಂಗಲ್ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಂಡಮಾರುತ : ಹಡಗು ಮುಳುಗಿ 31 ಸಾವು
ಇಂಡೋನೇಷಿಯಾ, ಜು. 4: ಪ್ರಯಾಣಿಕರ ಹಡಗು ಮುಳುಗಿದ ಪರಿಣಾಮ 31 ಮಂದಿ ದಾರುಣ ಸಾವಿಗೀಡಾದ ಘಟನೆ ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ನಡೆದಿದೆ. ಚಂಡಮಾರುತದ ಕಾರಣ ಹಡಗು ಮುಳುಗಲು ಪ್ರಾರಂಭಗೊಂಡ ತಕ್ಷಣ ಎಚ್ಚೆತ್ತುಕೊಂಡ ನಾವಿಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಆತ ಹಡಗನ್ನು ಹತ್ತಿರದ ದ್ವೀಪದತ್ತ ನಡೆಸಿದ್ದಾನೆ. ಇದರಿಂದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದು ಹಲವು ಪ್ರಯಾಣಿಕರ ಜೀವ ಉಳಿದಿದೆ. ಮುಳುಗಿದ ಹಡಗಿನಲ್ಲಿ ಸಿಬ್ಬಂದಿಯೂ ಸೇರಿ 164 ಮಂದಿ ಇದ್ದರು ಎಂದು ರಾಷ್ಟ್ರೀಯ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ 130 ಮಂದಿಯನ್ನು ರಕ್ಷಿಸಲಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಇಂಡೋನೇಷಿಯಾ ಸಾರಿಗೆ ಸಚಿವಾಲಯ ಹೇಳಿದೆ. ಮುಳುಗಿದ ಹಡಗಿನಲ್ಲಿ ಕೇವಲ ಪ್ರಯಾಣಿಕರಷ್ಟೇ ಅಲ್ಲದೆ 48 ವಾಹನಗಳೂ ಇದ್ದವು ಎನ್ನಲಾಗಿದ್ದು ದುರಂತದಲ್ಲಿ ಅಪಾರ ಪ್ರಮಾಣ ಸಂಪತ್ತು ಸಹ ನಷ್ಟವಾಗಿದೆ. ಇಂಡೋನೇಷಿಯಾದಲ್ಲಿ ಈ ಒಂದು ತಿಂಗಳಿನಲ್ಲಿ ಸಂಭವಿಸಿದ ಎರಡನೇ ಹಡಗು ದುರಂತ ಇದಾಗಿದೆ. ಕಳೆದ ಎರಡು ವಾರಗಳ ಹಿಂದೆ ಸುಮಾತ್ರ ದ್ವೀಪದ ಬಳಿ ನಡೆದ ಹಡಗು ದುರಂತದಲ್ಲಿ 200ಕ್ಕೆ ಹೆಚ್ಚಿನ ಜನ ಸಾವನ್ನಪ್ಪಿದ್ದರು.