ಸಿದ್ದಾಪುರ, ಜು. 4: ಪೊಲೀಸ್ ಠಾಣೆಯ ಎದುರಿನಲ್ಲಿ ನಿಲ್ಲಿಸಿದ್ದ ಪೊಲೀಸ್ ಸಿಬ್ಬಂದಿಗೆ ಸೇರಿದ ಬೈಕ್ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೆನ್ನಯ್ಯನಕೋಟೆ ಉಪ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ವಸಂತ್ ಕುಮಾರ್ ಎಂಬವರಿಗೆ ಸೇರಿದ ಬೈಕ್ಗೆ ಭಾನುವಾರ ರಾತ್ರಿ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿಗಳಾದ ಚಂದ್ರು, ಪ್ರವೀಣ, ಅಶ್ರಫ್ ಮೂವರು ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಚೆನ್ನಯ್ಯನಕೋಟೆ ಗ್ರಾಮದ ನಿವಾಸಿಯಾಗಿರುವ ಚಂದ್ರ ಎಂಬಾತನ ವಿರುದ್ಧ ಹಲವಾರು ಪ್ರಕರಣಗಳು ಈ ಹಿಂದೆ ದಾಖಲಾಗಿತ್ತು. ಮೈಸೂರು ಜಿಲ್ಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸರು ಈತನ ಬಗ್ಗೆ ಚೆನ್ನಯ್ಯನಕೋಟೆಗೆ ಆಗಮಿಸಿ ಅಲ್ಲಿಯ ಉಪಠಾಣೆಯ ಸಿಬ್ಬಂದಿ ವಸಂತ್ ಕುಮಾರ್ ಅವರ ಬಳಿ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದರು.
ಈ ವಿಚಾರದಲ್ಲಿ ಚಂದ್ರ ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನು ಎನ್ನಲಾಗಿದೆ. ಈ ದ್ವೇಷದಿಂದ ಅಶ್ರಫ್ ಹಾಗೂ ಪ್ರವೀಣ್ ಜೊತೆ ಸೇರಿ ಚಂದ್ರ ಬೈಕ್ಗೆ ಬೆಂಕಿ ಹಚ್ಚಿ ಸುಟ್ಟಿದ್ದ. ನಂತರ ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರ್, ವಸಂತ್ಕುಮಾರ್, ವಿಠಲ್ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.