*ಗೋಣಿಕೊಪ್ಪಲು, ಜು. 4: ತಿತಿಮತಿ ಮಾಯಮುಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ಅತಿಯಾಗಿದ್ದು ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಮಾಯಮುಡಿ ಭಾಗದಲ್ಲಿ ಹಾಡು ಹಗಲೇ ಆನೆಗಳು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಸುತ್ತಾಡುತ್ತಿವೆ. ಮೋಟಾರ್ ಬೈಕ್ ಸವಾರರು, ಆಟೋರಿಕ್ಷಾದವರು ಹಾಗೂ ಕಾರ್ಮಿಕರು ತೊಂದರೆಗೆ ಒಳಗಾಗಿದ್ದಾರೆ.

ಚೆನ್ನಂಗೊಲ್ಲಿ ಬಳಿ ಬಲಕ್ಕೆ ತಿರುಗಿದರೆ ಮಾಯಮುಡಿ ಬಾಳೆಲೆ ಮುಖ್ಯ ರಸ್ತೆಯ ಎಡಬಲದಲ್ಲಿ ಕಾಫಿ ತೋಟಗಳಿವೆ. ಈ ತೋಟದಿಂದ ಕಾಡಾನೆಗಳು ರಸ್ತೆ ದಾಟಿ ಮತ್ತೊಂದು ಕಾಫಿ ತೋಟಕ್ಕೆ ಹಗಲಿನಲ್ಲೇ ನಿರಂತರವಾಗಿ ಸುತ್ತಾಡುತ್ತಿವೆ. ಕಾಫಿ ತೋಟದಿಂದ ದಿಢೀರನೆ ರಸ್ತೆಗೆ ಬರುವ ಕಾಡಾನೆಗಳು ಬೈಕ್ ಸವಾರರಿಗೆ ಗೊತ್ತಾಗದೆ ಆನೆ ಧಾಳಿಗೆ ಒಳಗಾಗಿದ್ದಾರೆ.

ಬೈಕ್ ಸವಾರರು ಆನೆಗೆ ಹೆದರಿ ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಕೆಲವರು ಆನೆಗಳಿಗೆ ಗುದ್ದಿದ್ದು ಇದೆ. ಜತೆಗೆ ಆನೆಗಳು ಕೂಡ ಎದುರಾದವರ ಮೇಲೆ ಧಾಳಿ ನಡೆಸಿವೆ. ಬಾಳಾಜಿಯಿಂದ ಧನುಗಾಲದವರೆಗೆ ಜನತೆ ಓಡಾಡುವದಕ್ಕೆ ಭಯಪಡುತ್ತಿದ್ದಾರೆ. ಕಮಟೆ ಬಳಿ ಶಾಲಾ ಮಕ್ಕಳನ್ನು ಕರೆದೊಯುತ್ತಿದ್ದ ಆಟೋ ಮೇಲೆ ಕಳೆದ 2 ತಿಂಗಳ ಹಿಂದೆ ಧಾಳಿ ನಡೆಸಿದ ಕಾಡಾನೆ ಆಟೋವನ್ನು ಸಂಪೂರ್ಣವಾಗಿ ಜಜ್ಜಿ ಹಾಕಿತ್ತು. ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು.

ಇದೀಗ ಎರಡು ದಿನದ ಹಿಂದೆ ಮಾಯಮುಡಿಯ ಕೋಲುಬಾಣೆ ಬಳಿ ಹಗಲಿನ ವೇಳೆಯಲ್ಲಿಯೇ ಕಾಡಾನೆ ಎದುರಾಗಿ ಮಹಿಳೆಯನ್ನು ಗಾಯಗೊಳಿಸಿದೆ. ಇದರಿಂದ ಈ ಭಾಗದ ಕಾರ್ಮಿಕರು, ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯದಿಂದ ಬಂದಿರುವ ಕಾಡಾನೆಗಳು ಕಾಫಿ ತೋಟವನ್ನೇ ಅರಣ್ಯ ಮಾಡಿಕೊಂಡಿವೆ.