ಮಡಿಕೇರಿ, ಜು. 4: ಕನ್ನಡ ಚಿತ್ರರಂಗದಲ್ಲಿ ಕೊಡಗಿನ ಹಲವು ತಾರೆಯರು ಗಮನ ಸೆಳೆದಿದ್ದಾರೆ. ಇವರ ಸಾಲಿನಲ್ಲಿ ಇದೀಗ ಮತ್ತೊಬ್ಬ ಯುವತಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಶಶಿಕಲಾ, ಪ್ರೇಮಾ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಶ್ವೇತಾ ಚಂಗಪ್ಪ, ದಿಶಾ ಪೂವಯ್ಯ, ಶುಭ್ರ ಅಯ್ಯಪ್ಪ, ಪ್ರಜ್ವಲ್ ಪೂವಯ್ಯ, ರಶ್ಮಿಕಾ ಮಂದಣ್ಣರಾದಿ ಯಾಗಿ ಹಲವಾರು ಯುವತಿಯರು ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಬ್ಬ ನಟಿಯಾಗಿ ಮಾಳೇಟಿರ ಶಹನ್ ಪೊನ್ನಮ್ಮ ಸದ್ಯದಲ್ಲೇ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಹನ್ ಪೊನ್ನಮ್ಮ ಇತ್ತೀಚೆಗಷ್ಟೆ ಮುಕ್ತಾಯಗೊಂಡ ಸ್ಟಾರ್ ಸುವರ್ಣ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’’ವಿನಲ್ಲಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಜೂನ್ 29ರಂದು ಭಿತ್ತರವಾದ ಈ ರಿಯಾಲಿಟಿ ಶೋದ ಫೈನಲ್‍ನಲ್ಲಿ ಶಹನ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾಳೆ.

‘‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’’ವಿನಲ್ಲಿ ಬೆಂಗಳೂರಿನ ಮೆಬೀನಾ ಮೈಕಲ್ ವಿನ್ನರ್ ಆಗಿ ರೂ. 7 ಲಕ್ಷ ಹಣವನ್ನು ತನ್ನದಾಗಿಸಿಕೊಂಡರೆ ಕೊಡಗು ಜಿಲ್ಲೆಯಿಂದ ಈ ಶೋನಲ್ಲಿ ಪಾಲ್ಗೊಂಡಿದ್ದ ಶಹನ್ ಪೊನ್ನಮ್ಮ ಹಾಗೂ ಬಬಿನ್ ಮಚ್ಚಾಮಾಡ ಅವರುಗಳು ಈ ಸ್ಪರ್ಧೆಯಲ್ಲಿದ್ದರು. ಇವರ ಪೈಕಿ ಶಹನ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ರೂ. 3 ಲಕ್ಷ ಹಣ ಇವರದ್ದಾಗಿದೆ.

ಈ ರಿಯಾಲಿಟಿ ಶೋ ಕುರಿತು ‘ಶಕ್ತಿ’ಯೊಂದಿಗೆ ಸಂತಸ ವ್ಯಕ್ತಪಡಿಸಿದ ಶಹನ್ ಇದೊಂದು ಸಾಹಸಮಯ ವಾದ ಅನುಭವವಾಗಿದೆ. ಕೊಡಗಿನ ಪರಿಸರದಲ್ಲಿ ಹುಟ್ಟಿ ಬೆಳೆದದ್ದು ತಮ್ಮ ಸಾಧನೆಗೆ ಅನುಕೂಲವಾಯಿತು. ಶೂಟಿಂಗ್ ಸಂದರ್ಭದಲಿ ಕಾಲು ಫ್ರ್ಯಾಕ್ಷರ್ ಆದ ಕಾರಣ ಕೆಲವು ಸಮಯ ಹೊರಗೆ ಉಳಿದಿದ್ದೆ. ಈ ಸಂದರ್ಭ ಕೌಟುಂಬಿಕ ಹಾಕಿ ಉತ್ಸವ ವೀಕ್ಷಣೆಗೂ ಆಗಮಿಸಿದ್ದನ್ನು ಸ್ಮರಿಸಿ ಕೇವಲ ನಟನೆ ಇದಲ್ಲ ರಫ್ ಅಂಡ್ ಟಫ್‍ನ ಸ್ಪರ್ಧೆ ಇದಾಗಿತ್ತೆಂದರು.

ಎರಡು ಚಿತ್ರ ಬಿಡುಗಡೆಗೆ ಸಿದ್ಧ

ಈ ರಿಯಾಲಿಟಿ ಶೋಗೂ ಮುನ್ನ ಶಹನ್ ಸದ್ದಿಲ್ಲದೆ ಎರಡು ಕನ್ನಡ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು, ಈ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ವಿಠಲ್ ಭಟ್ ನಿರ್ದೇಶನದ ಹ್ಯಾಂಗ್ ಓವರ್ ಚಿತ್ರದಲ್ಲಿ ಈಕೆ ಹೊಸನಟರಾದ ಚಿರಾಗ್, ರಾಜ್, ಭರತ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದಲ್ಲದೆ ತೇಸಜ್ ನಿರ್ದೇಶನದ ಮತ್ತೊಂದು ಚಿತ್ರ ರಂಗಾದ ಹುಡುಗರುವಿನಲ್ಲೂ ಶಹನ್ ನಾಯಕಿಯಾಗಿ ಅಭಿನಯಿಸಿದ್ದಾಳೆ. ಮೂರನೇ ಚಿತ್ರವಾಗಿ ರಂಕಲ್ ರಾಟೆಯೂ ಸಿದ್ಧಗೊಳ್ಳುತ್ತಿದೆ.

ಮೈಸೂರಿನ ಮಹಾಜನಸ್ ಕಾಲೇಜಿನಲ್ಲಿ ಎಂ.ಕಾಂ. ವ್ಯಾಸಂಗ ಮಾಡಿರುವ ಈಕೆ ಪಾಲಿಬೆಟ್ಟ ಮೇಕೂರಿನಲ್ಲಿ ನೆಲೆಸಿರುವ ಮಾಳೇಟಿರ ಗಣೇಶ್ ಹಾಗೂ ಬಬಿತಾ ದಂಪತಿಯ ಪುತ್ರಿ. ಪ್ರಸ್ತುತ ಚಿತ್ರರಂಗದ ಬ್ಯುಸಿಯ ನಡುವೆ ಬ್ಯಾಂಕಿಂಗ್ ಪರೀಕ್ಷೆಗೆ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿ ರುವದಾಗಿ ಶಹನ್ ‘ಶಕ್ತಿ’ಗೆ ತಿಳಿಸಿದಳು.

-ಶಶಿ.