ಸೋಮವಾರಪೇಟೆ, ಜು. 4: ಸ್ಥಳೀಯ ಪಟ್ಟಣ ಪಂಚಾಯಿತಿಯ 11ನೇ ವಾರ್ಡ್‍ನ ಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಆಕ್ಷೇಪಣೆಯನ್ನು ಸರ್ಕಾರಕ್ಕೆ ಕಳುಹಿಸುವಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಯೋರ್ವರು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ಮಾರ್ಕೆಟ್ ರಸ್ತೆ(11ನೇ ವಾರ್ಡ್) ಮೀಸಲಾತಿಯು ಮೂರನೇ ಬಾರಿಗೆ ನಿರಂತರವಾಗಿ ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ಕರಡು ಅಧಿಸೂಚನೆಯನ್ನು ವಿಶೇಷ ರಾಜ್ಯಪತ್ರದಲ್ಲಿ ಹೊರಡಿಸಲಾಗಿತ್ತು. ಹಾಲಿ ಹೊರಡಿಸಿರುವ ಸಾಮಾನ್ಯ ಮಹಿಳೆಗಿರುವ ಮೀಸಲಾತಿಯನ್ನು ರದ್ದುಗೊಳಿಸಬೇಕೆಂದು ಕೋರಿ ವಾರ್ಡ್‍ನ ನಿವಾಸಿ ಎಸ್. ಸಂಪತ್ ಹಾಗೂ ಅಲ್ಲಿನ ನಾಗರಿಕರು ಸೋಮವಾರಪೇಟೆ ತಹಶೀಲ್ದಾರ್‍ರವರ ಮುಖಾಂತರ ಜೂನ್ 19 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದ ಸಿಬ್ಬಂದಿ ಅನಿಲ್ ಎಂಬವರು ಜೂನ್ 22 ರಂದು ಸೋಮವಾರಪೇಟೆ ತಹಶೀಲ್ದಾರ್‍ರಿಂದ ಸಲ್ಲಿಕೆಯಾದ ಆಕ್ಷೇಪಣಾ ಪತ್ರವನ್ನು ಸ್ವೀಕರಿಸಿದ್ದರು. ಆದರೆ ಆ ಆಕ್ಷೇಪಣಾ ಪತ್ರವನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ರವಾನಿಸಲು ವಿಳಂಬಧೋರಣೆ ಅನುಸರಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆ ಜೂನ್ 30.6.2018 ರಂದು ಇವರ ಆಕ್ಷೇಪಣಾ ಪತ್ರವನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ರವಾನಿಸಿ, ಇದರ ಪ್ರತಿಯನ್ನು ಸಂಪತ್‍ಗೆ ನೀಡಿದ್ದಾರೆ. ಆದರೆ ಜೂನ್ 30 ರಂದು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯು ರಾಜ್ಯ ಸರ್ಕಾರದ ಏಳು ಹಿರಿಯ ಶ್ರೇಣಿಯ ಅಧಿಕಾರಿಗಳು ಸುದೀರ್ಘವಾಗಿ ಚರ್ಚಿಸಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಯವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅದೇ ದಿನ (30-6-2018) ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಲ್ಲಿಕೆಯಾದ ನಮ್ಮ ಅರ್ಜಿಯು ಮೂಲೆಗುಂಪಾಗಿರುವ ಸಾಧ್ಯತೆಯಿದೆ ಎಂದು ಸಂಪತ್ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳ ಅಚಾತುರ್ಯದ ಕುರಿತು ಈಗಾಗಲೇ ಸಂಬಂಧಿಸಿದ ಎಲ್ಲಾ ಪ್ರಾಧಿಕಾರಗಳು, ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ದೂರು ನೀಡಿದ್ದು, ಒಂದು ವೇಳೆ ಅಲ್ಲಿಯೂ ಅನ್ಯಾಯವಾದರೆ ತಾವು ಹಾಗೂ ವಾರ್ಡ್‍ನ ನಿವಾಸಿಗಳು ಸೇರಿ ನ್ಯಾಯಾಲಯದ ಮೊರೆ ಹೋಗುವದಾಗಿ ತಿಳಿಸಿದ್ದಾರೆ.