ಸೋಮವಾರಪೇಟೆ, ಜು. 4: ಸಮೀಪದ ಹಿರಿಕರ ಗ್ರಾಮದಲ್ಲಿ ಮನೆಯ ಮುಂಭಾಗದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕರೊಬ್ಬರ ಮೇಲೆ ಕಾಡಾನೆ ಧಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಿರಿಕರ ಗ್ರಾಮದ ಕೃಷಿಕ ಎಚ್.ಈ. ಈರಪ್ಪ (67) ಅವರು ಬೆಳಗ್ಗಿನ ಜಾವ ಮನೆಯ ಸಮೀಪವೇ ಇರುವ ಕಾಫಿ ತೋಟದಲ್ಲಿ ಕೆಲಸ ಮಡುತ್ತಿದ್ದ ಸಂದರ್ಭ ಕಾಡಾನೆ ಧಾಳಿ ಮಾಡಿದ್ದು, ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.

ಬೆಳಿಗ್ಗೆ 6.30ರ ಸಮಯದಲ್ಲಿ ರಸ್ತೆಯಲ್ಲೇ ಬಂದ ಒಂಟಿ ಸಲಗ ಮನೆಯಂಗಳ ದಾಟಿ ಕಾಫಿ ತೋಟದಲ್ಲಿದ್ದ ಮಾಲೀಕನ ಮೇಲೆ ಸೊಂಡಲಿನಿಂದ ಧಾಳಿ ಮಾಡಿದೆ. ಕಾಫಿ ಗಿಡದ ಮೇಲೆ ಬಿದ್ದ ಈರಪ್ಪ ಅವರು ರಕ್ಷಣೆಗಾಗಿ ಮರದ ಬುಡವನ್ನು ಆಶ್ರಯಿಸಿದ್ದಾರೆ. ಆಕ್ರೋಶಗೊಂಡ ಕಾಡಾನೆ ಘೀಳಿಡುತ್ತ ಕಾಲಿನಿಂದ ತುಳಿಯುವ ಪ್ರಯತ್ನ ಮಾಡಿದ ಸಂದರ್ಭ ಮನೆಯವರು ಬೊಬ್ಬೆ ಹೊಡೆದಿದ್ದಾರೆ. ನಂತರ ಆನೆ ಅರಣ್ಯ ಪ್ರದೇಶದತ್ತ ತೆರಳಿದೆ.

ಬೆಳಗ್ಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು, ರಸ್ತೆಯಲ್ಲಿ ಬರುತ್ತಿದ್ದ ಕಾಡಾನೆಯನ್ನು ಗಮನಿಸಿ ಮನೆಯೊಳಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಸೊಂಟದ ಭಾಗಕ್ಕೆ ಪೆಟ್ಟಾಗಿರುವದರಿಂದ ಗಾಯಾಳು ಈರಪ್ಪ ಅವರಿಗೆ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಾಡಾನೆ ಧಾಳಿ ಬಗ್ಗೆ ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

ನಿಡ್ತ, ಮಾಲಿಂಬಿ ಮೀಸಲು ಅರಣ್ಯದಿಂದ ಕಾಡಾನೆಗಳು ಗ್ರಾಮ ಗಳನ್ನು ಪ್ರವೇಶಿಸಿದಂತೆ ಆನೆಕಂದಕ ನಿರ್ಮಾಣ ಮಾಡಲಾಗಿದ್ದರೂ ಕೆಲವು ಕಡೆಗಳಲ್ಲಿ ಕಂದಕನ್ನು ದಾಟಿ ಕೃಷಿ ಫಸಲನ್ನು ನಷ್ಟಪಡಿಸುತ್ತಿದೆ. ಕಳೆದೆರಡು ದಿನಗಳಿಂದ ಕಾಡಾನೆಗಳ ಹಿಂಡು ಆಹಾರಕ್ಕಾಗಿ ಗ್ರಾಮದೊಳಗೆ ಸುತ್ತಾಡುತ್ತಿವೆ. ಕೃಷಿಕರ ಮೇಲಿನ ಧಾಳಿ ಘಟನೆಯಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ. ಆನೆ ಕಂದಕವನ್ನು ದುರಸ್ತಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರಣ್ಯ ಇಲಾಖಾಧಿಕಾರಿಗಳನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಹಿಂದೆ ಕೃಷಿ ಫಸಲು ನಷ್ಟಗೊಳಿಸುತ್ತಿದ್ದ ಆನೆಗಳು ಇದೀಗ ಮನುಷ್ಯರ ಮೇಲೆಯೇ ಧಾಳಿ ನಡೆಸುತ್ತಿವೆ. ತಕ್ಷಣ ಇದನ್ನು ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಪ್ರಮುಖರಾದ ಎಚ್.ಪಿ. ರಾಜಪ್ಪ, ಎಚ್.ಎನ್. ಲೋಕೇಶ್, ಚಂದ್ರಶೇಖರ್, ಬಿ.ಎನ್. ವಸಂತ್ ಒತ್ತಾಯಿಸಿದ್ದಾರೆ.