ಕೂಡಿಗೆ, ಜು. 4: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದಿನಂಪ್ರತಿ ಕಾಡಾನೆಗಳಿಂದ ಬೆಳೆ ನಷ್ಟ ಹಾಗೂ ಜೀವ ಹಾನಿಗಳು ಸಂಭವಿಸುತ್ತಿವೆ. ಕಾಡಂಚಿನಿಂದ ಕಾಡಾನೆಗಳು ಗ್ರಾಮಗಳತ್ತ ದಾಟದಂತೆ ಕಂದಕಗಳನ್ನು ನಿರ್ಮಾಣ ಮಾಡಿದ್ದರೂ ಸಹ, ಕಾಡಾನೆಗಳು ಕಂದಕದೊಳಗೆ ಮಣ್ಣನ್ನು ಕಾಲಿನಿಂದ ತಳ್ಳಿ ದಾರಿ ಮಾಡಿಕೊಂಡು ಅರಣ್ಯದಂಚಿನ ಜಮೀನುಗಳಿಗೆ ಧಾಳಿ ಮಾಡಿ ಲಕ್ಷಾಂತರ ರೂಪಾಯಿಗಳ ಬೆಳೆ ನಷ್ಟ ಪಡಿಸುವದಲ್ಲದೆ, ಮನೆಗಳನ್ನು ಹಾನಿಗೊಳಿಸುತ್ತಿರುವ ಘಟನೆಗಳು ನಡೆಯುತ್ತಿವೆ.
ಈ ಸಮಸ್ಯೆಗಳಿಗೆ ಪರಿಹಾರವಾಗಿ ಅರಣ್ಯ ಇಲಾಖೆಯ ವತಿಯಿಂದ ಕಳೆದ 5 ವರ್ಷಗಳ ಹಿಂದೆಯಿಂದಲೂ ಲಕ್ಷಗಟ್ಟಲೆ ವೆಚ್ಚದಲ್ಲಿ ಕಾಡಂಚಿನಲ್ಲಿ ವಿದ್ಯುತ್ ಸೋಲಾರ್, ಸ್ಪಿಕ್ ಕಿಲ್ಲರ್, ಸ್ಪಿಕ್ ಗೇಟ್ ಅಳವಡಿಸಿದ್ದರೂ ಸಹ ಕಾಡಾನೆಗಳು ತಮ್ಮ ಬುದ್ಧಿವಂತಿಕೆ ಯಿಂದ ಸೋಲಾರ್ ಕಂಬಗಳನ್ನು ಬೀಳಿಸಿ ದಾಟಿ ಗ್ರಾಮಗಳತ್ತ ಬರುವ ಪ್ರಸಂಗಗಳು ನಡೆದಿವೆ.
ಕಾಡಾನೆಗಳ ಸಮಸ್ಯೆಗಳನ್ನು ಪರಿಹರಿಸಲು ಅರಣ್ಯ ಇಲಾಖೆಯು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲೇ ಪ್ರಥಮವಾಗಿ ಶ್ರೀಲಂಕಾದಲ್ಲಿ ಅಳವಡಿಸಿರುವ ಮಾದರಿಯಲ್ಲಿ ಟೆಂಟಿಕಲ್ ಸೋಲಾರ್ಅನ್ನು ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಅಳವಡಿಸಿದ್ದು, ಇದೀಗ ಸೋಮವಾರ ಪೇಟೆ ತಾಲೂಕಿನ ಕೂಡಿಗೆ-ಹೆಬ್ಬಾಲೆ ವ್ಯಾಪ್ತಿಯ ಚಿನ್ನೇನಹಳ್ಳಿ, ಸೀಗೆಹೊಸೂರು ಅರಣ್ಯದಂಚುಗಳಿಗೆ 8 ಕಿ.ಮೀ ಉದ್ದದಲ್ಲಿ ಟೆಂಟಿಕಲ್ ಸೋಲಾರ್ಅನ್ನು ಅಳವಡಿಸಲಾಗಿದೆ. ಕಾಜೂರು ಅರಣ್ಯದಲ್ಲಿಯೂ 2 ಕಿ.ಮೀಗಳಷ್ಟು ಅಳವಡಿಸಲಾಗಿದೆ.
1 ಕಿ.ಮೀ ಸೋಲಾರ್ ತಂತಿಗೆ ಸುಮಾರು 2.5 ಲಕ್ಷ ರೂಗಳ ವೆಚ್ಚ ತಗಲಿದೆ. ಕಾಡಂಚಿನ ಮರದಿಂದ ಮರಕ್ಕೆ ನೆಲದಿಂದ 2 ಅಡಿ ಮೇಲಕ್ಕೆ 5 ಅಡಿ ಎತ್ತರಕ್ಕೆ ಟೆಂಟಿಕಲ್ ಸೋಲಾರ್ ತಂತಿಗಳನ್ನು ನೇತುಬಿಡಲಾಗಿದೆ. ಈ ಕಾಮಗಾರಿಗೆ ಮೈಸೂರಿನ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದು, 3 ಕಿ.ಮೀ. ವ್ಯಾಪ್ತಿಗೆ ಸೋಲಾರ್ ನಿರ್ವಹಣೆಗೆ ಚಿಕ್ಕ ಘಟಕಗಳನ್ನು ಅಳವಡಿಸಿ, ಕಾಡಾನೆಗಳು ತನ್ನ ಕಾಲುಗಳಿಂದ ಅಥವಾ ಸೊಂಡಿಲು ಗಳಿಂದ ತಳ್ಳದಂತೆ ವ್ಯವಸ್ಥೆ ಮಾಡಲಾಗಿದೆ.
ಕಾಡಾನೆಗಳು ಕಾಡಂಚಿಗೆ ಬಂದ ತಕ್ಷಣ ಕಂದಕ ದಾಟಿ ಜಮೀನುಗಳತ್ತ ಬರುವ ಸಂದರ್ಭಕ್ಕೆ ಈ ನೇತುಬಿದ್ದ ವಿದ್ಯುತ್ ಸೋಲಾರ್ ಸ್ಪರ್ಶ ತಾಗಿದರೆ ತಕ್ಷಣ ಕಾಡಿಗೆ ಮರಳುತ್ತವೆ. ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಗೊಳ್ಳುತ್ತದೆ ಎಂದು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
-ಕೆ.ಕೆ.ನಾಗರಾಜಶೆಟ್ಟಿ