ಶ್ರೀಮಂಗಲ, ಜು. 4: ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ತೋಟಗಾರಿಕೆ ಮತ್ತು ಕೃಷಿಯನ್ನು ಅವಲಂಭಿಸಿರುವ ಜಿಲ್ಲೆಯ ಲಕ್ಷಾಂತರ ಕುಟುಂಬದ ಸುಧಾರಣೆಗೆ ಮತ್ತು ಕೃಷಿ ಅಭಿವೃದ್ಧಿಗೆ ಸರಕಾರದ ಸಮಗ್ರ ಕೃಷಿ ನೀತಿ ಬದಲಾವಣೆ ಆಗಬೇಕು. ಮುಖ್ಯವಾಗಿ ದೇಶದ ಸಂಸದರು ಮತ್ತು ಶಾಸಕರ ವೇತನ -ಸೌಲಭ್ಯದ ಪರಿಷ್ಕರಣೆಗೆ ಅನುಗುಣವಾಗಿ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನ ಗಳಿಗೂ ಬೆಲೆ ನಿಗದಿಪಡಿಸಬೇಕು. ಈ ಮೂಲಕ ದೇಶೀಯ ರೈತರನ್ನು ರಕ್ಷಿಸಬೇಕು. ಕೃಷಿಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ನೀತಿ ಜಾರಿಯಾಗ ಬೇಕೆಂದು ನಬಾರ್ಡ್‍ನ ವಿಭಾಗೀಯ ವ್ಯವಸ್ಥಾಪಕರ ನೇತೃತ್ವದಲ್ಲಿ ಕೃಷಿ ಸುಧಾರಣೆಗೆ ಕರೆದಿದ್ದ ಸಭೆಯಲ್ಲಿ ರೈತರು ಆಗ್ರಹಿಸಿದರು.ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ನಡೆದ ಆಮಂತ್ರಿತ ರೈತರ ಸಭೆಯಲ್ಲಿ ಈ ವಿಚಾರವನ್ನು ನಬಾರ್ಡ್‍ನ ವಿಭಾಗೀಯ ವ್ಯವಸ್ಥಾಪಕ ಸುಬ್ರಹ್ಮಣಿ ನಂಬೋದರಿ ಅವರ ಗಮನಕ್ಕೆ ತಂದರು.ರೈತ ನಿ.ಕ್ಯಾಪ್ಟನ್ ಕಾಳಿಮಾಡ ರಾಣ ನಂಜಪ್ಪ ಮಾತನಾಡಿ, ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ಭತ್ತದ ಗದ್ದೆಗಳು ಬಹುತೇಕ ಪಾಳು ಬಿದ್ದಿದೆ. ಮುಖ್ಯವಾಗಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಸರಕಾರದ ಅವೈಜ್ಞಾನಿಕ ಸಬ್ಸಿಡಿ ಹಾಗೂ ಉಚಿತ ಯೋಜನೆ ಗಳಿಂದ ದುಡಿಯುವ ಕೈಗಳನ್ನು ಕಟ್ಟಿ ಹಾಕಲಾಗಿದೆ. ಪ್ರಸ್ತುತ ಭತ್ತಕ್ಕೆ ಕೆ.ಜಿಗೆ 13 ರೂ. ಇದ್ದು ಇದನ್ನು ಉತ್ಪಾದಿಸಲು ರೈತನಿಗೆ 20 ರಿಂದ 25 ರೂ. ಖರ್ಚಾಗುತ್ತಿದೆ. ಆದರೆ, ಕಳೆದ ಹಲವು ವರ್ಷದಿಂದ ಇತರ ಎಲ್ಲಾ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದರೂ ರೈತ ಬೆಳೆಯುವ ಬೆಳೆಗೆ ಅದಕ್ಕನುಗುಣವಾಗಿ ಬೆಲೆ ದೊರೆಯುತ್ತಿಲ್ಲ. ಆದ್ದರಿಂದ ಭತ್ತದ ಗದ್ದೆ ಕೃಷಿಯೇತರ ಚಟುವಟಿಕೆಗೆ ಪರಿವರ್ತನೆಯಾಗುತ್ತಿದೆ. ನಿರಂತರ ವಾಗಿ ಕೃಷಿಯಲ್ಲಿ ರೈತ ನಷ್ಟ ಅನುಭವಿ ಸುತ್ತಿದ್ದು, ಯುವಪೀಳಿಗೆ ಕೃಷಿಯಿಂದ ವಿಮುಖವಾಗುವಂತೆ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ರಾಜ್ಯ ಕೊಡಗನ್ನು ವಿಶೇಷವಾಗಿ ಪರಿಗಣಿಸ ಬೇಕು. ಕೊಡಗಿನ 35 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶ ಕೃಷಿ ನಷ್ಟದಿಂದ ಪಾಳು ಬಿಡದಂತೆ ವಿಶೇಷ ಯೋಜನೆ ರೂಪಿಸಬೇಕು. ಪ್ರತಿ ಹೆಕ್ಟೇರ್‍ಗೆ 25 ಸಾವಿರ ವಿಶೇಷ ಸಹಾಯಧನ ನೀಡಿದರೆ, ಮತ್ತೆ ಪಾಳು ಬಿಟ್ಟ ಗದ್ದೆಗಳು ಪುನರ್‍ಚೇತನ ಗೊಳ್ಳಲಿದೆ. ಇದರಿಂದ ಅಂತರ್‍ಜಲ ವೃದ್ಧಿಯಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಕಾವೇರಿ ನದಿಯನ್ನು ಅವಲಂಭಿಸಿ ಕೃಷಿ ಮಾಡುವ ರಾಜ್ಯದ ಇತರ ಜಿಲ್ಲೆಗಳು ವಾರ್ಷಿಕ ಎರಡು ಬೆಳೆ ಬೆಳೆಯುವ

(ಮೊದಲ ಪುಟದಿಂದ) ಮೂಲಕ ಲಾಭಗಳಿಸಬಹುದು. ಹಾಗೆಯೇ ಕುಡಿಯುವ ನೀರಿನ ಕೊರತೆಯೂ ನೀಗುತ್ತದೆ. ಇಲ್ಲಿ ದೊರೆಯುವ ಲಾಭವನ್ನು ಜಿಲ್ಲೆಯ ಭತ್ತ ಬೆಳೆಯುವ ರೈತರಿಗೆ ನೀಡುವಂತಾಗಬೇಕೆಂದು ವಿಚಾರ ಮಂಡಿಸಿದರು.

ಕಳೆದ ಎರಡು ವರ್ಷದಿಂದ ಕರಿಮೆಣಸು ಆಮದು ಮಾಡಿ, ನಮ್ಮ ದೇಶದ ವ್ಯಾಪಾರಿಗಳು ಮರು ರಫ್ತು ಮಾಡುತ್ತಿರುವದರಿಂದ ದೇಶೀಯ ಕರಿಮೆಣಸಿನ ಬೆಲೆ ತೀರಾ ಕುಸಿದಿದೆ. ವ್ಯಾಪಾರಿಗಳು ಮಾತ್ರ ಲಾಭಗಳಿಸುತ್ತಿದ್ದು, ಕರಿಮೆಣಸು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಸರಕಾರದ ನೀತಿ ಬದಲಿಸಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕಾಗಿದೆ ಎಂದÀರು.

ಚೆಪ್ಪುಡಿರ ಸುಜು ಕರುಂಬಯ್ಯ ಮಾತನಾಡಿ, ರಾಜ್ಯ ಸರಕಾರ ರಚನೆ ಮಾಡಿದ್ದ ಕೃಷಿ ಬೆಲೆ ಆಯೋಗವು ಮಲೆನಾಡು ಪ್ರದೇಶದಲ್ಲಿ ಪ್ರತಿ ಏಕರೆ ಭತ್ತ ಬೆಳೆಯುವ ರೈತರಿಗೆ 14,375 ರೂ. ನಷ್ಟವಾಗುತ್ತಿದೆ ಎಂದು ವರದಿ ಸಲ್ಲಿಸಿದರೂ ಈ ನಷ್ಟ ಸರಿಪಡಿಸಿ ಲಾಭದತ್ತ ರೈತನನ್ನು ಕೊಂಡೊಯ್ಯಲು ಯಾವದೇ ಯೋಜನೆ ರೂಪಿಸಿಲ್ಲ. ಭತ್ತ ಬೆಳೆಗೆ ಸರಕಾರ ಸೂಕ್ತ ಪ್ರೋತ್ಸಾಹ ನೀಡುತ್ತಿಲ್ಲ. ನಿರಂತರ ಭತ್ತ ಬೆಳೆಯಿಂದ ನಷ್ಟ ಅನುಭವಿಸುತ್ತ ಕೃಷಿಯಲ್ಲಿ ಮುಂದುವರೆಯಲು ರೈತ ಸಮುದಾಯಕ್ಕೆ ಶಕ್ತಿ ಇಲ್ಲದಾಗಿದೆ. ಸರಕಾರ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ನಲ್ಲೂರು ಗ್ರಾಮದ ಗಣೇಶ್ ತಿಮ್ಮಯ್ಯ ಮಾತನಾಡಿ, 20 ವರ್ಷದ ಹಿಂದೆ ಕಾಫಿಗೆ ಇದ್ದ ದರವೇ ಈಗಲೂ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಭತ್ತ ಹಾಗೂ ಇತರ ಬೆಳೆಗಳಿಗೂ ಹೆಚ್ಚಿನ ದರ ದೊರೆಯುತ್ತಿಲ್ಲ. ಆದರೆ, ಕಳೆದ 10 ವರ್ಷದಿಂದ ಉತ್ಪಾದನಾ ವೆಚ್ಚ ಶೇ.300ರಷ್ಟು ಏರಿಕೆಯಾಗಿದೆ. ಹಾಗೆಯೇ ರಸಗೊಬ್ಬರ ದರ ಸಹ ಶೇ.270ರಷ್ಟು ಏರಿಕೆಯಾಗಿದೆ. ದೇಶದ ಲೋಕಸಭಾ ಸದಸ್ಯರು ಹಾಗೂ ವಿಧಾನ ಸಭಾ ಸದಸ್ಯರ ವೇತನ ಹಾಗೂ ಸೌಲಭ್ಯ ಕಳೆದ 10 ವರ್ಷದಿಂದ ಶೇ.300ರಷ್ಟು ಪರಿಷ್ಕರಣೆಯಾಗಿದೆ. ಆದರೆ, ರೈತರು ಉತ್ಪಾದಿಸುವ ಬೆಳೆಗಳಿಗೆ ಮಾರುಕಟ್ಟೆ ಸುಧಾರಣೆಯಾಗದೆ ಕುಸಿಯುತ್ತಿದೆ. ರೈತರು ಇದರಿಂದ ನಷ್ಟ ಅನುಭವಿಸಿ ಸಾಲದ ಹೊರೆಯಿಂದ ಸಂಕಷ್ಟ ಎದುರಿಸುತ್ತಿದ್ದು, ರೈತರ ಬೆಳೆಗಳಿಗೆ ವೈಜ್ಞಾನಿಕ ಮಾರುಕಟ್ಟೆ ದೊರೆತರೆ, ಸಾಲ ಮನ್ನಾದ ಅಗತ್ಯತೆ ಇಲ್ಲ ಎಂದು ಹೇಳಿದರು.

ಜಿಲ್ಲಾ ಲೀಡ್ ಬ್ಯಾಂಕ್‍ನ ವ್ಯವಸ್ಥಾಪಕರಾದ ಎಂ.ಸಿ.ನಾಣಯ್ಯ ಮಾತನಾಡಿ ಜಿಲ್ಲೆಯಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿ ಪಶುಸಂಗೋಪನೆ ಮಾಡಲು ಅವಕಾಶವಿದೆ. ಜಿಲ್ಲೆಯಲ್ಲಿ 55 ಸಾವಿರ ಲೀಟರ್ ಹಾಲಿನ ಬೇಡಿಕೆ ಇದ್ದು, ಜಿಲ್ಲೆಯಲ್ಲಿ ಕೇವಲ 15 ಸಾವಿರ ಲೀಟರ್ ಹಾಲು ಮಾತ್ರ ದೊರೆಯುತ್ತಿದೆ. ಉಳಿದ ಹಾಲನ್ನು ಹೊರ ಜಿಲ್ಲೆಯಿಂದ ತರಿಸಿಕೊಳ್ಳಲಾಗುತ್ತಿದ್ದು, ಡೈರಿ ಸ್ಥಾಪನೆ ಹಾಗೂ ಅದಕ್ಕೆ ಸಂಬಂಧಿತ ಯೋಜನೆಗೆ ನಬಾರ್ಡ್‍ನಿಂದ ಸಹಾಯಧನ ದೊರೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ನಬಾರ್ಡ್‍ನ ವಿಭಾಗೀಯ ವ್ಯವಸ್ಥಾಪಕ ಸುಬ್ರಹ್ಮಣಿ ನಂಬೋದರಿ ಮಾತನಾಡಿ, ರೈತರ ಸಲಹೆಗಳನ್ನು ಸರಕಾರಕ್ಕೆ ವರದಿ ಸಲ್ಲಿಸುವ ಭರವಸೆ ನೀಡಿದರು. ವೇದಿಕೆಯಲ್ಲಿ ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್ ಉಪಸ್ಥಿತರಿದ್ದರು. ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಮನೆಯಪಂಡ ಸೋಮಯ್ಯ, ಸದಸ್ಯರಾದ ಚೆಪ್ಪುಡಿರ ವಿಜು ಕರುಂಬಯ್ಯ, ಕೋಟ್ರಮಾಡ ಅರುಣ್ ಅಪ್ಪಣ್ಣ, ಮತ್ತಿತರರು ಮಾತನಾಡಿದರು.