ಮಡಿಕೇರಿ, ಜು. 4: ಹೇಮಾವತಿ ಅಣೆಕಟ್ಟೆ ನಿರ್ಮಾಣ ವೇಳೆ ಹಿನ್ನೀರು ಪ್ರದೇಶದಲ್ಲಿ ಜಾಗ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಪರ್ಯಾಯವಾಗಿ 4 ಎಕರೆ ಸರಕಾರಿ ಜಮೀನು ಮಂಜೂರಾಗಿದ್ದನ್ನು ಇಂದು ಅಧಿಕೃತವಾಗಿ ಹಸ್ತಾಂತರ ಮಾಡಲಾಯಿತು.

ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ನೆಲೆಸಿರುವ ರಮೇಶ್ ಎಂಬವರಿಗೆ, ಇಂದು ಕುಶಾಲನಗರ ಡಿವೈಎಸ್‍ಪಿ ಮುರುಳಿಧರ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನಡುವೆ, ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಮತ್ತು ಭೂಮಾಪನ ಸಿಬ್ಬಂದಿ 4 ಎಕರೆ ಜಾಗವನ್ನು ಸರ್ವೆ ನಡೆಸಿ ನಿರಾಶ್ರಿತನಿಗೆ ಹಸ್ತಾಂತರಿಸಿದರು.

ಈ ಜಾಗ ಮಂಜೂರಾತಿಗೊಳಿಸದಂತೆ ಕೆಲವರು ಅಡ್ಡಿಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಭದ್ರತೆ ನಡುವೆ ಸಂಬಂಧಿಸಿದ ಇಲಾಖೆಗಳಿಂದ ಕಾನೂನಿನಡಿಯಲ್ಲಿ ರಮೇಶ್ ವಶಕ್ಕೆ ನೀಡಲಾಯಿತು. ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.