ಕೂಡಿಗೆ, ಜು. 4: ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಹವಾಮಾನಕ್ಕನುಗುಣವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಭತ್ತವನ್ನು ಹಾಗೂ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ತಾಲೂಕಿನ ವಿವಿಧ ಸಹಕಾರ ಸಂಘಗಳಲ್ಲಿ ದಾಸ್ತಾನು ಇಡಲಾಗಿದೆ. ಇದರ ಸದುಪಯೋಗವನ್ನು ಈ ವ್ಯಾಪ್ತಿಯ ರೈತರು ಪಡೆದುಕೊಳ್ಳಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

2018-19ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ ವತಿಯಿಂದ ಈವರೆಗೆ ಧೀರ್ಘಾವಧಿ ತಳಿಗಳಾದ ತುಂಗಾ, ಇಂಟಾನ್, ಬಿ.ಆರ್. 2655, ಮಧ್ಯಮಾವಧಿ ತಳಿಗಳಾದ ಐ.ಆರ್.64, ಅತಿರಾ ಹಾಗೂ ಕೆ.ಪಿ.1 (ಕರ್ನಾಟಕ ಪೊನ್ನಂಪೇಟೆ ರೈಸ್1) ತಳಿಗಳನ್ನು ಹಾಗೂ ಅಲ್ಪಾವಧಿಯ ತಳಿಗಳಾದ ಹೈಬ್ರಿಡ್ ಭತ್ತವಾದ ವಿ.ಎನ್.ಆರ್ 2233 ಬಿತ್ತನೆ ಭತ್ತವನ್ನು ವಿತರಿಸಲಾಗುವದು. ಅಲ್ಲದೆ, ಜೋಳದ ಬಿತ್ತನೆ ಬೀಜಗಳಾದ ಗಂಗಾ ಕಾವೇರಿ, ದ್ರೋಣ ಸೇರಿದಂತೆ ವಿವಿಧ ಹೈಬ್ರಿಡ್ ತಳಿಗಳನ್ನು ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲಿ ದಾಸ್ತಾನು ಇಡಲಾಗಿದೆ. ರೈತರು ತಮ್ಮ ಜಮೀನಿನ ದಾಖಲಾತಿ ಪ್ರತಿಯನ್ನು ನೀಡಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.