ಮಡಿಕೇರಿ, ಜು. 4: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಈಗಾಗಲೇ ಆರಂಭವಾಗಿದ್ದು, ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಮರಳು ತುಂಬಿದ ಅಧಿಕ ಭಾರದ ವಾಹನಗಳು ಸಂಚರಿಸುವದರಿಂದ ರಸ್ತೆಗಳು ಹಾಳಾಗಿ ವಾಹನಗಳ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತೆಯೇ, ಕೊಡಗು ಜಿಲ್ಲೆಯು ಪ್ರವಾಸಿ ತಾಣವಾಗಿರುವದರಿಂದ ಸಾಕಷ್ಟು ಪ್ರವಾಸಿಗರ ವಾಹನಗಳ ದಟ್ಟಣೆಯು ಕೊಡಗು ಜಿಲ್ಲೆಗೆ ಹೆಚ್ಚಾಗಿ ಆಗಮಿಸುತ್ತಿದ್ದು, ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ರಸ್ತೆ ಬದಿಗಳ ಮಣ್ಣು ಭೂಕುಸಿತದಿಂದಾಗಿ ಸಹ ರಸ್ತೆಯ ಮೇಲೆ ಬಿದ್ದು, ರಸ್ತೆಯ ಸಂಚಾರಕ್ಕೆ ತೊಂದರೆಯಾಗುತ್ತಿರುತ್ತದೆ. ಇದರಿಂದ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಜಿಲ್ಲೆಯ ರಸ್ತೆಗಳು ಸಾಮಾನ್ಯವಾಗಿ ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳು ಭಾರ ತಡೆಯುವ ಕ್ಷಮತೆ ಕ್ಷೀಣಿಸಿರುತ್ತದೆ. ಈ ಭಾಗಗಳಲ್ಲಿ ಮರದ ದಿಮ್ಮಿಗಳನ್ನು ಸಾಗಿಸುವ ಲಾರಿಗಳು ರಸ್ತೆಯ ಶೋಲ್ಡರ್ಗಳನ್ನು ಹಾನಿ ಮಾಡುತ್ತಿದ್ದು ಇದರಿಂದ ಸಾರ್ವಜನಿಕ ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗುತ್ತಿರುವದು ಕಂಡುಬಂದಿದೆ. ಹಾಗೆಯೇ ನೆರೆಯ ಜಿಲ್ಲೆಗಳಿಂದ ಕೊಡಗು ಜಿಲ್ಲೆಯ ರಸ್ತೆಗಳ ಮುಖಾಂತರ ಮರಳು ಮತ್ತು ಮರದ ದಿಮ್ಮಿಗಳನ್ನು ತುಂಬಿದ ಭಾರ ತುಂಬಿದ ಭಾರೀ ವಾಹನಗಳು ಸಂಚರಿಸುತ್ತಿರುವದನ್ನು ಗಮನಿಸಲಾಗಿದೆ.