ಕುಶಾಲನಗರ, ಜು. 4: ಕುಶಾಲನಗರ ಪಟ್ಟಣ ಪಂಚಾಯಿತಿ ಯಲ್ಲಿ ಮತ್ತೆ ಮಹಾಕಾಳಿ ಪ್ರಕರಣ ಮರುಕಳಿಸಿದೆ. ಮಹಿಳೆಯೊಬ್ಬರ ಮೇಲೆ ಮಹಾಕಾಳಿ ಆವಾಹನೆ ಯಾಗುತ್ತಿದ್ದ ಮೇರೆಗೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯ ಖಾಸಗಿ ಶಾಲಾ ಕಟ್ಟಡವೊಂದರ ಕೆಳಭಾಗದಲ್ಲಿ ಕಾಳಿಯ ವಿಗ್ರಹ ಹೂಳಲ್ಪಟ್ಟಿದೆ. ಅದನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಸ್ಥಳೀಯ ವಿದ್ಯಾಸಂಸ್ಥೆಯ ಮುಖ್ಯಸ್ಥೆಯಾಗಿದ್ದ ಕಾಳಿಮಾತೆಯ ಭಕ್ತೆ ಮುಬೀನ್ತಾಜ್ ಎಂಬವರು ಕಳೆದ ಕೆಲವು ಸಮಯದಿಂದ ಸ್ಥಳೀಯ ಆಡಳಿತ ಸೇರಿದಂತೆ ಹಲವು ಇಲಾಖೆಗಳಿಗೆ ಒತ್ತಾಯ ಮಾಡುತ್ತಿದ್ದರು. ಆದರೆ ಇದುವರೆಗೆ ಯಾರೂ ಸ್ಪಂದನ ನೀಡಿಲ್ಲ. ಕೂಡಲೆ ವಿಗ್ರಹಗಳನ್ನು ಹೊರ ತೆಗೆಯಬೇಕೆಂದು ಮತ್ತೆ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇದರೊಂದಿಗೆ ಜಿಲ್ಲಾಧಿಕಾರಿ ಸೇರಿದಂತೆ ಪುರಾತತ್ವ ಇಲಾಖೆಗೂ ಮನವಿ ಸಲ್ಲಿಸಿರುವದಾಗಿ ‘ಶಕ್ತಿ’ಗೆ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕಾಳಿ ರೂಪದಲ್ಲಿ ತೆರಳಿದ ಮುಬೀನ್ ತಾಜ್ ಪಂಚಾಯಿತಿ ಕಟ್ಟಡ ಮುಂಭಾಗ ಪ್ರತಿಭಟನೆ ಕೂಡ ನಡೆಸಿ ತನ್ನ ಮನವಿಯನ್ನು ಪುರಸ್ಕರಿಸಬೇಕೆಂದು ಆಗ್ರಹಿಸಿದ್ದರು. ಆದರೆ ಪೊಲೀಸರು ಆ ಸಂದರ್ಭ ಠಾಣೆಗೆ ಕಾಳಿಯನ್ನು ಹೊತ್ತೊಯ್ದ ಘಟನೆಯೂ ನಡೆದಿತ್ತು. ನಂತರ ಪ್ರಕರಣ ರಾಜ್ಯವ್ಯಾಪಿ ಮಾಧ್ಯಮಗಳಲ್ಲಿ ವರದಿಯಾಗಿರುವದರೊಂದಿಗೆ ತಣ್ಣಗಾಗಿತ್ತು. ಇದೀಗ ಕಾಳಿ ಮಾತೆ ಮತ್ತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದು, ಕೂಡಲೇ ವಿಗ್ರಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ವಿಪರ್ಯಾಸ ಎಂದರೆ ಈ ಹಿಂದೆ ಕಾಳಿ ಮಾತೆ ಪ್ರತಿಭಟನೆ ಮಾಡಿದ ಪಟ್ಟಣ ಪಂಚಾಯಿತಿಯ ಹಳೆಯ ಕಟ್ಟಡ ನೆಲಸಮಗೊಂಡು ಪಂಚಾಯಿತಿ ಕಚೇರಿ ಕಾಳಿ ವಿಗ್ರಹಗಳು ಇದೆ ಎನ್ನಲಾದ ಕಟ್ಟಡದ ಆವರಣಕ್ಕೆ ಸ್ಥಳಾಂತರಗೊಂಡಿರುವದು ಕಾಳಿಮಾತೆಯ ಶಕ್ತಿಗೆ ಪುಷ್ಟಿ ಬಂದಂತಾಗಿದೆ. ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಿದ ಮುಬೀನ್ ತಾಜ್ ಇದೇ ಮಾತನ್ನು ಅಧಿಕಾರಿಗಳಿಗೂ ಹೇಳಿದ್ದು ತನ್ನ ಕೋರಿಕೆಯನ್ನು ಈಡೇರಿಸದ ಪಂಚಾಯಿತಿ ಕಟ್ಟಡವನ್ನೇ ತಾನು ನೆಲಸಮ ಮಾಡಿದ್ದೇನೆ. ಇದೀಗ ನನ್ನ ಆವರಣಕ್ಕೆ ನೀವುಗಳು ಬಂದು ಬಿದ್ದಿದ್ದೀರ. ಮನವಿ ಪೂರೈಸದಿದ್ದಲ್ಲಿ ಮುಂದೆ ಭಾರೀ ಅನಾಹುತಗಳು ಸಂಭವಿಸಲಿದೆ ಎಂದು ಎಚ್ಚರಿಸಿರುವದು ಪಂಚಾಯಿತಿ ಅಧಿಕಾರಿಗಳಲ್ಲಿ ಒಂದು ರೀತಿಯ ಅವ್ಯಕ್ತ ಭೀತಿ ಗೋಚರಿಸಿದೆ. ಏನೇ ಆಗಲಿ ಕಾಳಿಮಾತೆಯ ಮನವಿಯನ್ನು ಪಂಚಾಯಿತಿಯಿಂದ ಮೇಲಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವದು ಎಂಬ ಭರವಸೆಯಿಂದ ಸದ್ಯ ಕಾಳಿಮಾತೆ ಪ್ರಸನ್ನಳಾಗುವದರೊಂದಿಗೆ ಮುಂದಿನ ಬೆಳವಣಿಗೆಗೆ ಕಾದು ಕುಳಿತಿರುವದಾಗಿ ತಿಳಿದು ಬಂದಿದೆ.