ಸುಂಟಿಕೊಪ್ಪ, ಜು. 4: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಮೈಸೂರಿನ ಜನಸೇವಾ ಟ್ರಸ್ಟ್ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಲ್ತ್ ಕ್ಲಬ್ ಆಶ್ರಯದಲ್ಲಿ ಪ್ರೌಢಶಾಲೆಯ ಬಾಲಕಿಯರಿಗೆ ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಛತೆ ಕುರಿತಂತೆ ಹೆಣ್ಣು ಮಕ್ಕಳ ಸಬಲ ಯೋಜನೆ ಕುರಿತು ಎರಡು ದಿನಗಳ ಕಾಲ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಮುಖ್ಯ ಶಿಕ್ಷಕ ಬಾಲಕೃಷ್ಣ, ಕಿಶೋರಿಯರು ಪ್ರೌಢಾವಸ್ಥೆಯಲ್ಲಿ ತಮ್ಮ ಆರೋಗ್ಯ ರಕ್ಷಣೆ, ಆಹಾರ ಪದ್ಧತಿ ಹಾಗೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕೆ.ಎನ್. ಸರಳಾಮಣಿ ಮಾತನಾಡಿ, ಹೆಣ್ಣು ಮಕ್ಕಳು ಪ್ರೌಢಾವಸ್ಥೆಯಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ಹೊಂದಿಕೊಂಡು ಉತ್ತಮ ಆರೋಗ್ಯ ಕಂಡುಕೊಳ್ಳಬೇಕು ಎಂದರು.
ತರಬೇತಿ ಸಂಯೋಜಕಿ ಬಿ.ಕೆ. ಲಕ್ಷ್ಮಿ ಮಾತನಾಡಿ, ಕಿಶೋರಾವಸ್ಥೆಯಲ್ಲಿ ಎದುರಿಸಬಹುದಾದ ಆರೋಗ್ಯ ಸಮಸ್ಯೆ ಮತ್ತು ಸೋಂಕು ರೋಗಗಳ ನಿವಾರೋಣಾಪಾಯಗಳ ಬಗ್ಗೆ ತಿಳಿಸಿದರಲ್ಲದೆ, ಲಿಂಗ ಅಸಮಾನತೆ, ಲೈಂಗಿಕ ಸಂಪರ್ಕದ ಸೋಂಕುಗಳು, ಋತುಚಕ್ರ, ಆರೋಗ್ಯ ಸಮಸ್ಯೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಶಿಕ್ಷಕಿ ಎಂ.ಎನ್. ಲತಾ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರಾದ ಕೆ.ಕೆ. ಪುಷ್ಪ, ಶಾಂತ ಹೆಗಡೆ, ಟಿ. ಪವಿತ್ರ, ಮಂಜುಳಾ ಇದ್ದರು.