ಕುಶಾಲನಗರ, ಜು. 4: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿದ್ದ ಕೆರೆಗಳ ಸರ್ವೆ ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಸೋಮವಾರಪೇಟೆ ಸರ್ವೆಯರ್ ಮಂಜುನಾಥ್ ನೇತೃತ್ವದ ತಂಡ ಕುಶಾಲನಗರ ಗೌಡ ಸಮಾಜದ ಬಳಿಯ ಕೆರೆ ಹಾಗೂ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಸಮೀಪದ ಕೆರೆ ವ್ಯಾಪ್ತಿಯ ದಾಖಲೆ ಪಡೆದು ಸರ್ವೆ ಕಾರ್ಯಕ್ಕೆ ಸಿದ್ದತೆ ನಡೆಸಿದೆ.

ಗೌಡ ಸಮಾಜದ ಬಳಿ ಸರ್ವೆ ನಂ 27 ರಲ್ಲಿ ಇರುವ ಲಕ್ಷ್ಮಿಗೌಡನ ಹೊಲದ ಕೆಳಗಿನ ಕೆರೆ ಜಮಾಬಂದಿ ಪ್ರಕಾರ 76 ಸೆಂಟ್ ವಿಸ್ತೀರ್ಣದ ಕೆರೆ ಹೊಂದಿದ್ದು ಈ ಬಗ್ಗೆ ಸರ್ವೆ ಕಾರ್ಯ ನಡೆಯಲಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಕುಶಾಲನಗರ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಬಳಿಯಿರುವ ಸರ್ವೆ ನಂ 138 ರ ಪ್ರಕಾರ ಕುಲವಾಡಿಕಟ್ಟೆ ಕೆರೆಯಲ್ಲಿ ಒಟ್ಟು 97 ಸೆಂಟ್ ವಿಸ್ತೀರ್ಣದ ಕೆರೆ ಅಸ್ತಿತ್ವದಲ್ಲಿತ್ತು.

ಈ ಬಗ್ಗೆ ಸಮಗ್ರ ಸರ್ವೆ ಕಾರ್ಯ ನಡೆಸಲಾಗುವದು ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಗ್ರಾಮ ಲೆಕ್ಕಿಗ ಗೌತಮ್, ಪಟ್ಟಣ ಪಂಚಾಯ್ತಿ ಅಧಿಕಾರಿ ವೆಂಕಟ್ ರಾಘವ್, ಕೆರೆ ಸಂರಕ್ಷಣಾ ವೇದಿಕೆ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಕೆ.ಜಿ. ಮನು, ಮಂಜುನಾಥ್, ಎಂ.ಎಸ್.ರಾಜೇಶ್, ಎಂ.ಡಿ.ಕೃಷ್ಣಪ್ಪ, ಪಿ.ಕೆ.ಜಗದೀಶ್, ಪಂಚಾಯಿತಿ ಪೌರಕಾರ್ಮಿಕರು ಪಾಲ್ಗೊಂಡಿದ್ದರು.