ಮಡಿಕೇರಿ, ಜು. 4: ಹಾರಂಗಿ ಜಲಾಶಯ ತುಂಬಲು ಇನ್ನು ಕೇವಲ 8.73 ಅಡಿಯಷ್ಟು ನೀರಿನ ಪ್ರಮಾಣ ಅಗತ್ಯವಿದ್ದು, ಪ್ರಸಕ್ತ 2850.27 ಅಡಿಗಳಷ್ಟು ನೀರು ಜಲಾಶಯದಲ್ಲಿ ಶೇಖಣೆಗೊಂಡಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಿದ್ದು, ಒಂದೆರಡು ದಿನಗಳಲ್ಲಿ ಉತ್ತಮ ಮಳೆಯಾದರೆ ಜಲಾಶಯ ತುಂಬಲಿದೆ. ಜಲಾಶಯಕ್ಕೆ 1818 ಕ್ಯೂಸೆಕ್ಸ್ ನೀರಿನ ಒಳಹರಿವು ಗೋಚರಿಸಿದೆ.

ಕಳೆದ ವರ್ಷ ಈ ಅವಧಿಗೆ ಜಲಾಶಯದಲ್ಲಿ 2826.03 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, ಪ್ರಸಕ್ತ ನೀರಿನ ಮಟ್ಟಕ್ಕಿಂತಲೂ 24.24 ಅಡಿಗಳಷ್ಟು ಕಡಿಮೆ ಸಂಗ್ರಹವಾಗಿತ್ತು.

ಮಳೆ ವಿವರ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 0.48 ಇಂಚು ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ ಸರಾಸರಿ 53.49 ಇಂಚು ದಾಖಲಾಗಿತ್ತು. ಹಿಂದಿನ ಸಾಲಿನ 29.77 ಇಂಚು ಮಳೆಗಿಂತ ಈ ಅವಧಿಗೆ 23.72 ಇಂಚು ಅಧಿಕ ಮಳೆ ದಾಖಲಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಇದುವರೆಗೆ 72.94 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 40.30 ಇಂಚು ದಾಖಲಾಗುವದರೊಂದಿಗೆ ಈ ವರ್ಷ ಇಂದಿಗೆ 32.64 ಇಂಚು ಅಧಿಕ ಮಳೆ ಕಂಡು ಬಂದಿದೆ.

ವೀರಾಜಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 0.20 ಇಂಚು ಮಳೆಯಾಗಿದ್ದು, ವರ್ಷಾರಂಭದಿಂದ ಇಂದಿನ ತನಕ 49.23 ಇಂಚು ಮಳೆ ದಾಖಲಾಗಿದೆ. ಹಿಂದಿನ ವರ್ಷ ಈ ಅವಧಿಗೆ 27.13 ಇಂಚು ಮಳೆಯಾಗಿತ್ತು. ಅಲ್ಲದೆ ಪ್ರಸಕ್ತ 22.01 ಇಂಚು ಅಧಿಕ ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಇದುವರೆಗೆ ಸರಾಸರಿ 38.26 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 21.89 ಇಂಚು ಮಳೆಯಾಗಿದ್ದು, ಪ್ರಸಕ್ತ 16.37 ಇಂಚು ಅಧಿಕ ಮಳೆಯಾಗಿದೆ.

ಕೃಷಿ ಚುರುಕು : ಉತ್ತರ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಭತ್ತದ ನಾಟಿ ಕೆಲಸ ಆರಂಭಗೊಂಡಿದ್ದು, ಬಯಲು ಪ್ರದೇಶಗಳಲ್ಲಿ ಮುಸುಕಿನ ಜೋಳ, ದ್ವಿದಳ ಧಾನ್ಯ ಇತ್ಯಾದಿ ಕೃಷಿ ಮಾಡಲಾಗಿದೆ. ಉಳಿದಂತೆ ಜಿಲ್ಲೆಯಾದ್ಯಂತ ಸಸಿ ಮಡಿಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಮುಂದಿನ 15 ದಿನಗಳಲ್ಲಿ ಬಹುತೇಕ ನಾಟಿಗೆ ಚಾಲನೆ ದೊರೆಯಲಿದೆ.