ಕುಶಾಲನಗರ, ಜು. 4: ಮಾರಾಟಕ್ಕೆಂದು ರಸ್ತೆ ಬದಿಯಲ್ಲಿರಿಸಿದ್ದ ಪ್ರಾಣಿಗಳ ಸಿಮೆಂಟ್ ಆಕೃತಿಗಳನ್ನು ರಸ್ತೆಯಲ್ಲಿ ತೆರಳುತ್ತಿದ್ದ ಪ್ರವಾಸಿಗರು ಹೊತ್ತೊಯ್ದ ಪ್ರಕರಣವೊಂದು ಗುಡ್ಡೆಹೊಸೂರು ಬಳಿ ನಡೆದಿದೆ. ಅಲ್ಲಿನ ಅಂಗಡಿಯೊಂದರಲ್ಲಿ ಪ್ರಾಣಿ, ಪಕ್ಷಿಗಳ ವಿಗ್ರಹಗಳು ಹಾಗೂ ಪ್ರದರ್ಶನಕ್ಕೆ ಇಡುವ ಹಲವು ಬೆಲೆಬಾಳುವ ವಸ್ತುಗಳನ್ನು ಅಂಗಡಿ ಮಾಲೀಕರು ರಸ್ತೆ ಬದಿಯಲ್ಲಿ ಜೋಡಿಸಿದ್ದು ಕೆಲವು ಪ್ರಾಣಿಗಳ ವಿಗ್ರಹಗಳು ನಾಪತ್ತೆಯಾಗಿರುವದು ಬೆಳಕಿಗೆ ಬಂದಿದೆ.

ಸಿಸಿ ಕ್ಯಾಮೆರಾದಲ್ಲಿ ಪರಿಶೀಲನೆ ಮಾಡಿದ ಸಂದರ್ಭ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅದನ್ನು ಎತ್ತಿಕೊಂಡು ಪರಾರಿಯಾಗಿರುವ ಬಗ್ಗೆ ಖಚಿತಗೊಂಡಿದೆ. ಕಾರಿನಲ್ಲಿ ಬಂದ ಜೋಡಿಯೊಂದು ಈ ಕೃತ್ಯ ಎಸಗಿದ್ದು ಪ್ರದರ್ಶನಕ್ಕೆ ಇಟ್ಟಿದ್ದ ನವಿಲು ಹಾಗೂ ಸಿಂಹದ ವಿಗ್ರಹವನ್ನು ಕಳವು ಮಾಡಿದ್ದಾರೆ ಎಂದು ಅಂಗಡಿ ಮಾಲೀಕರು ಸಿಸಿ ಕ್ಯಾಮೆರಾ ದಾಖಲೆ ಸಹಿತ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವದೇ ರೀತಿಯ ಪುಕಾರು ಠಾಣೆಯಲ್ಲಿ ದಾಖಲಾಗಿಲ್ಲ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.