ಕೂಡಿಗೆ, ಜು. 4: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪವಿರುವ ಜೇನುಕುರುಬರ ಹುಣಸೆಪಾರೆ ಹಾಡಿಯಲ್ಲಿ ವಾಸವಿರುವ 212 ಕುಟುಂಬಗಳಿಗೆ ಗುಡಿಸಲು ಮುಕ್ತ ಸರಕಾರದ ಯೋಜನೆ ತಲುಪದಂತಾಗಿದೆ.
ಸರಕಾರದ ಹೊಸ ಹೊಸ ಯೋಜನೆಗಳು ಇಲ್ಲಿಗೆ ತಲುಪದೆ ಈ ಹಾಡಿಯಲ್ಲಿ ವಾಸಿಸುವ ಜೇನುಕುರುಬರ ಕುಟುಂಬಗಳು ಬಿದಿರುಳಿಂದ ತಾವೇ ಕಟ್ಟಿಕೊಂಡಿರುವ ಮಣ್ಣಿನ ಗೋಡೆ ಹಾಕಿ ಮನೆ ನಿರ್ಮಿಸಿಕೊಂಡು ಪ್ಲಾಸ್ಟಿಕ್ ಹೊದಿಕೆ ಹಾಕಿಕೊಂಡು ಬದುಕು ನಡೆಸುತ್ತಿರುವ ಈ ಜನರಿಗೆ ಸರಕಾರದ ಸೌಲಭ್ಯದ ಬೆಳಕು ಕಾಣದಂತಾಗಿದೆ.
ಹುಣಸೆಪಾರೆ ಸಮೀಪದಲ್ಲಿ ಕಕ್ಕೆಹೊಳೆಯ ನೀರು ಹರಿವದರಿಂದ ಗೋಡೆಗಳು ನೀರಿನ ತೇವಾಂಶದಿಂದ ಶೀತಮಯವಾಗಿ ಕೆಲವು ಮನೆಗಳು ಬಿರುಕು ಬಿಟ್ಟು, ಜೊತೆಗೆ ಗೋಡೆಗಳು ನೆಲಕ್ಕುರುಳಿವೆ. ಜೇನುಕುರುಬರ ಕುಟುಂಬಗಳಿಗೆ ಕಳೆದ ಎರಡು ವರ್ಷಗಳಿಂದ ಸಂಬಂಧಪಟ್ಟ ಸಮರ್ಪಕವಾದ ದಾಖಲಾತಿಗಳನ್ನು ನೀಡಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಯಾವದೇ ರೀತಿಯ ಸ್ಪಂದನೆ ದೊರಕದ ಆದಿಮಾನವನಂತೆ ಬದುಕುವ ಪರಿಸ್ಥಿತಿ ಎದುರಾಗಿದೆ. ಕೊಡಗು ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆ ಎಂದು ಮಾಡಲು ಹೊರಟಿರುವ ಜನಪ್ರತಿನಿಧಿಗಳು ಇದುವರೆಗೂ ಇದರತ್ತ ಗಮನಹರಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿ ತೆರಳುತ್ತಾರೆ ವಿನಃ ಇದುವರೆಗೂ ಯಾವದೇ ಸೌಲಭ್ಯ ಕಲ್ಪಿಸಿಲ್ಲ ಎಂಬದು ನಿವಾಸಿಗಳ ಆರೋಪ.
ಬೀಳುವ ಗೋಡೆಗೆ ಮರದ ಊರುಗೋಲು : ಹಾಡಿಯಲ್ಲಿ ಮಣ್ಣಿನಿಂದ ನಿರ್ಮಿಸಿಕೊಂಡು ವಾಸಿಸುತ್ತಿರುವ ಕೆಲವು ಜೇನುಕುರುಬರ ಮನೆಗಳ ಗೋಡೆಗಳು ಬಿರುಕುಬಿಟ್ಟು, ಮಳೆ ನೀರು ಮನೆಯೊಳಗೆ ನಿಲ್ಲುತ್ತದೆ. ಮಲಗಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಸ್ಪಂದನೆ ದೊರೆತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ವಾಸಿಸಲು ಯೋಗ್ಯವಾಗಿಲ್ಲದ ಕಳೆದ ಮೂರು ವರ್ಷಗಳ ಹಿಂದೆ ಒಂದು ಮನೆ ನಿರ್ಮಾಣಕ್ಕೆ 1.50 ಲಕ್ಷ ನಿರ್ಮಿಸಿದ ಮನೆಗಳು ಇದೀಗ ಮಳೆಯ ನೀರು ಗೋಡೆಗೆ ಬಿದ್ದು, ಗೋಡೆಯು ಬೀಳು ಹಂತ ತಲಪಿದೆ. ಅಲ್ಲದೆ, ಸಿಮೆಂಟ್ ಶೀಟ್‍ಗಳ ಜೋಡಣೆಯನ್ನು ಸಮರ್ಪಕವಾಗಿ ಮಾಡದೆÉ ಮಳೆಯ ನೀರು ಮನೆಯೊಳಗೆ ಬೀಳುತ್ತದೆ. ಕಳೆದ ತಿಂಗಳಿಂದ ಸುರಿಯುತ್ತಿರವ ಮಳೆಯಿಂದ ಸಂಜೆ 5 ಗಂಟೆಯೊಳಗೆ ಮನೆಯ ಹೊರಗೆ ಅಡುಗೆ ಮಾಡಿಕೊಂಡು ಊಟ ಮಾಡಿ ಮನೆಯೊಳಗೆ ಮಲಗಲು ಸಾಧ್ಯವಾಗುತ್ತಿಲ್ಲ. ಹೊರಗೆ ಟಾರ್ಪಲ್ ಹೊದಿಕೆಯಲ್ಲಿ ಮಲಗಿದರೆ ಕಾಡಾನೆಗಳ ಹಾವಳಿಯಿಂದ ಜೀವ ಭಯ ಅನುಭವಿಸುತ್ತಿರುವ ಹಾಡಿ ಜನರಿಗೆ ವಿದ್ಯುತ್ ಸಂಪರ್ಕವೂ ಮರೀಚಿಕೆಯಾಗಿಯೇ ಉಳಿದಿದೆ.
ನಾನ್ ಏನ್ ಮಾಡ್ನೆ, ಆಪೀಸಿಗೆ ಅಲ್ದು ಅಲ್ದು ಸುಸ್ತು....: ಹುಣಸೆಪಾರೆÉ ಹಾಡಿಗೆ ಮನೆಗಳನ್ನು ಇಲಾಖೆಯ ವತಿಯಿಂದ ನಿರ್ಮಿಸಿಕೊಳ್ಳಲು ಸಂಬಂಧಪಟ್ಟವರು ದಾಖಲಾತಿಗಳನ್ನು ಕೇಳುತ್ತಾರೆ. ಆದರೆ, ನಾವುಗಳು ಪಂಚಾಯ್ತಿಯಿಂದ ಹಿಡಿದು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದವರೆಗೂ ಅಲೆದರೂ ಇದುವರೆಗೂ ಅರ್ಜಿಯ ಬಗ್ಗೆ ಯಾವದೇ ಕ್ರಮಕೈಗೊಂಡಿಲ್ಲ. ನಾವು ಮಳೆ, ಚಳಿಯಲ್ಲಿಯೂ ಪ್ಲಾಸ್ಟಿಕ್ ಹೊದಿಕೆಯ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ಈ ಮನೆಯ ಸಮೀಪಕ್ಕೆ ಕಾಡಾನೆಗಳು ಬರುತ್ತಿರುವ ನಾವು ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಾಡಿಯ ನಿವಾಸಿಗಳು ತಮ್ಮ ನೋವಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಇದರ ಜೊತೆಯಲ್ಲಿ ಸಮೀಪದಲ್ಲೇ ಮೀಸಲು ಅರಣ್ಯದಂಚಿನಲ್ಲಿರುವದರಿಂದ ಕಾಡಾನೆಗಳ ಹಾವಳಿ ಇದ್ದು, ಹಾಡಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೇನುಕುರುಬ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಿದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಕಳೆದ 10 ವರ್ಷಗಳಿಂದಲೂ ಜೇನುಕುರುಬರ ಹಾಡಿಗಳಿಗೆ ಸೋಲಾರ್ ಬೇಲಿ ಹಾಕುವ ಯೋಜನೆಯಿದ್ದು, ಅರಣ್ಯ ಪ್ರದೇಶದಲ್ಲಿರುವ ಈ ವ್ಯಾಪ್ತಿಗೆ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿದ್ದರೂ, ಸಮರ್ಪಕವಾದ ನಿರ್ವಹಣೆ ಇಲ್ಲದೆ ಕಾಡಾನೆಗಳು ಮನೆಗಳತ್ತ ಬರುತ್ತವೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಸೋಲಾರ್ ಬೇಲಿಯ ವ್ಯವಸ್ಥೆಯನ್ನು ಅಳವಡಿಸಲು ಅಧಿಕಾರಿಗಳು ಮುಂದಾಗಬೇಕೆಂದು ಹಾಡಿಯ ನಿವಾಸಿಗಳಾದ ರಾಣಿ, ಗೌರಮ್ಮ, ಬೋಜಿ, ಚಿನ್ನಣ್ಣ ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟಿದ್ದ ನಿವಾಸಿಗಳಿಗೆ ಐಡಿಟಿಪಿ ವತಿಯಿಂದ ಜೇನುಕುರುವರ ಹಾಡಿಗೆ ನೀರನ್ನು ಒದಗಿಸಲುವ ಯೋಜನೆ ಹಮ್ಮಿಕೊಂಡು ಮೂರ್ನಾಲ್ಕು ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ಬೋರ್‍ವೆಲ್ ಕೊರೆಸಿ ಒಂದು ವರ್ಷ ಕಳೆದು ಮೋಟಾರ್ ಇಳಿಸಿದರೂ ಎರಡು ತಿಂಗಳ ಹಿಂದೆಯಷ್ಟೇ ಕುಡಿಯುವ ನೀರಿನ ಭಾಗ್ಯ ದೊರೆತಿದೆ.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಜೇನುಕುರುಬ ಹಾಡಿಗಳಿಗೆ ಮೂಲಭೂತ ಸೌಲಭ್ಯಗಳಿಗೆ 8 ರಿಂದ 10 ಲಕ್ಷ ರೂ ಹಣ ಬಿಡುಗಡೆಯಾಗಿದ್ದರೂ ಈ ಹಣವನ್ನು ಅಧಿಕಾರಿಗಳು ಸಮರ್ಪಕವಾಗಿ ವಿನಿಯೋಗಿಸಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲು ಯೋಜನೆಯಡಿಯಲ್ಲಿ (ಎಸ್‍ಸಿ,ಪಿಟಿ,ಎಸ್‍ಪಿ) ಈಗಾಗಲೇ ಸರಕಾರಗಳಿಂದ ಅನೇಕ ಯೋಜನೆಗಳಿಗೆ ಹಣ ಬರುತ್ತಿದೆ. ಈ ಯೋಜನೆಗಳ ಮೂಲಕ ಹುಣಸೆಪಾರೆ ಜನರಿಗೆ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಜಿಲ್ಲೆಗೆ ಬಂದ ಹಣವನ್ನು ಸಮರ್ಪಕವಾಗಿ ವಿನಿಯೋಗಿಸಬೇಕು ಎಂದು ಕೂಡಿಗೆ ಗ್ರಾ.ಪಂ ಸದಸ್ಯ ಟಿ.ಕೆ.ವಿಶ್ವನಾಥ್ ಆಗ್ರಹಿಸಿದ್ದಾರೆ.
ಹುಣಸೆಪಾರೆ ನಿವಾಸಿಗಳ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸಿ, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತು ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕೆಂದು ಹಾಡಿಯ ನಿವಾಸಿಗಳು ಆಗ್ರಹಿಸಿದ್ದಾರೆ.
(ವಿಶೇಷ ವರದಿ: ಕೆ.ಕೆ. ನಾಗರಾಜ ಶೆಟ್ಟಿ)