ಮಡಿಕೇರಿ, ಜು. 5: ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‍ನಲ್ಲಿ ರಾಜ್ಯದ ಕೃಷಿಕರ ರೂ. 34,000 ಕೋಟಿಯಷ್ಟು ಸುಸ್ತಿಯಾದ ಫಸಲು ಸಾಲ ಮನ್ನಾ ಮಾಡುವದಾಗಿ ಘೋಷಿಸಲಾಯಿತು. ಕಾಫಿಗೂ ಈ ಸಾಲ ಮನ್ನಾ ಅನ್ವಯವೇ ಎಂಬ ಸ್ಪಷ್ಟತೆ ಇಲ್ಲದುದರಿಂದ ಈ ಕುರಿತು, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಕಾಫಿಯೂ ಸಾಲ ಮನ್ನಾ ಪಟ್ಟಿಯಲ್ಲಿ ಅಡಕವಾಗಿರುವದು ಖಾತರಿ ಯಾಯಿತು. ಆದರೆ, ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಕೊಡಗಿನ ಬೆಳೆಗಾರರಿಗೆ ಸಾಲ ಮನ್ನಾ ಅನ್ವಯವಾದರೂ ಪ್ರಯೋಜನ ಮಾತ್ರ ಶೂನ್ಯ ಎಂಬದನ್ನು ಮಂಜುನಾಥ್ ಖಾತರಿಪಡಿಸಿದರು. ಇದು ಆಶ್ಚರ್ಯವಾದರೂ ಸತ್ಯ; ಏಕೆ ಗೊತ್ತೆ? ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರ್ರಿಯಾಗಿದ್ದಾಗ ತಲಾ ರೂ. 50 ಸಾವಿರದವರೆಗೆ ಸಾಲ ಮನ್ನಾ ಘೋಷಿಸಿದ್ದರು. ಈ ಹಿಂದಿನ ಸಾಲ ಮನ್ನಾ ಫಲಾನುಭವಿಗಳಿಗೆ ಈಗಿನ ಹೊಸ ಸಾಲ ಮನ್ನಾ ಸೌಲಭ್ಯ ಸಿಗುವದಿಲ್ಲ ಎಂಬದು ಈಗಿನ ಘೋಷಣೆಯಲ್ಲಿ ನಿರ್ಬಂಧಿಸಲ್ಟಟ್ಟ ಆಘಾತಕಾರಿ ಅಂಶ. ಕೊಡಗಿನಲ್ಲಿ ಸಹಕಾರೀ ಸಾಲ ಪಡೆದವರ ಪೈಕಿ ಈ ಹಿಂದೆ ಸಿದ್ದರಾಮಯ್ಯ ಅವರು ಘೋಷಿಸಿದ್ದ ತಲಾ ರೂ. 50 ಸಾವಿರ ಸಾಲ ಮನ್ನಾವನ್ನು ಕೊಡಗಿನ 35,000 ಮಂದಿ ಬೆಳೆÉಗಾರರು ಜಿಲ್ಲೆಯ ಸಹಕಾರಿ ಸಂಘಗಳಿಂದ ಪಡೆದುಕೊಂಡಿದ್ದಾರೆ. ಈ ಯಾರಿಗೂ ಇದೀಗ ಘೋಷಣೆಯಾದ ರೂ. 2 ಲಕ್ಷÀ ಮನ್ನಾ ಸೌಲಭ್ಯ ದೊರೆಯುವದಿಲ್ಲ. ಈಗ ಲಭ್ಯವಿರುವ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಸಹಕಾರೀ ಸಾಲ ಪಡೆದವರ ಪೈಕಿ ಕೇವಲ 168 ಮಂದಿ ಮಾತ್ರ ಈ ಸೌಲಭ್ಯ ಹೊಂದಲು ಅರ್ಹರಾಗಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಖಚಿತಪಡಿಸಿದರು. ಆದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಬೆಳೆಗಾರರು ಈ ನೂತನ ಸಾಲ ಮನ್ನಾ ಸೌಲಭ್ಯ ಹೊಂದಿಕೊಳ್ಳಬಹುದು. ಏಕೆಂದರೆ ಸಿದ್ದರಾಮಯ್ಯ ಅವರು ಘೋಷಿಸಿದ್ದ ಸಾಲ ಮನ್ನಾ ಕೇವಲ ಸಹಕಾರಿ ಸಾಲಕ್ಕೆ ಮಾತ್ರ ಲಭ್ಯವಿತ್ತು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದವರಿಗೆ ಅನ್ವಯವಾಗಿರಲಿಲ್ಲ. ಆದರೂ. ಇಲ್ಲಿಯೂ ಕೂಡ ನಿರ್ಬಂಧಕ್ಕೆ ಒಳಪಡುತ್ತದೆ. ಈಗಿನ ನಿರ್ಬಂಧದ ಅನ್ವಯ 1-4-2009 ರಿಂದ
31-12-2017 ರ ವರೆಗಿನ ಬಾಕಿಯಿರುವ ಅವಧಿ ಮೀರಿದ ಬೆಳೆ ಸಾಲಗಳಿಗೆ ಮಾತ್ರ
(ಮೊದಲ ಪುಟದಿಂದ) ಈ ಸೌಲಭ್ಯ ಅನ್ವಯವಾಗುತ್ತದೆ ಎಂದು ಅವರು ಮಾಹಿತಿಯಿತ್ತರು.
ಜಿಲ್ಲಾ ನಬಾರ್ಡ್ ಅಧಿಕಾರಿ ಯಂ.ಸಿ. ನಾಣಯ್ಯ ಅವರ ಪ್ರಕಾರ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ಫಸಲು ಸಾಲ ರೂ. 37.34 ಕೋಟಿ ಪಾವತಿಗೆ ಬಾಕಿಯಿದೆ. ಇನ್ನುಳಿದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಮೊತ್ತದ ಬಗ್ಗೆ ಇನ್ನೂ ಮಾಹಿತಿ ಸಂಗ್ರಹಿಸಬೇಕಾಗಿದೆ. ಇದರಲ್ಲಿಯೂ 2009 ರಿಂದ 31-12-2007 ರ ವರೆಗಿನ ಅವಧಿ ಮೀರಿದ ಫಸಲು ಸಾಲದ ಒಟ್ಟು ಮೊತ್ತದ ಅಂಕಿ ಅಂಶಗಳು ಕೂಲಂಕಷ ಅವಲೋಕನದ ಬಳಿಕವಷ್ಟೆ ಗೊತ್ತಾಗಲಿದೆ.
ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಕೊಡಗು ವಕ್ತಾರ ಕೆ.ಕೆ. ವಿಶ್ವನಾಥ್ ಅವರ ಪ್ರಕಾರ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಇದುವರೆಗೆ ಅವಧಿ ಮೀರಿದ ಫಸಲು ಸಾಲ ಒಟ್ಟು 3817.87 ಕೋಟಿ ಪಾವತಿಗೆ ಬಾಕಿಯಿದೆ. ಆದರೆ, ಈ ಪೈಕಿ ಈ ಹಿಂದಿನ ಸಾಲ ಮನ್ನಾ ಸೌಲಭ್ಯ ಪಡೆದವರೆಷ್ಟು ಎಂಬ ಮಾಹಿತಿ ದೊರಕಿದ ಬಳಿಕವಷ್ಟೆ ಎಷ್ಟ್ಟು ಮಂದಿ ಈಗಿನ ಹೊಸ ಸಾಲ ಮನ್ನಾದ ಪ್ರಯೋಜನ ಪಡೆಯಲಿದ್ದಾರೆ ಎಂಬದು ಸ್ಪಷ್ಟಗೊಳ್ಳಲಿದೆ. ಅಲ್ಲದೆ, ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲಾಗಿದೆ. ಕುಟುಂಬವೆಂದರೆ ರೈತ, ಆತನ ಪತ್ನಿ ಮತ್ತು ಅವಲಂಬಿತ ಮಕ್ಕಳು ಎಂದು ಅನ್ವಯವಾಗಲಿದ್ದು ಎಲ್ಲರ ಹೆಸರಿನಲ್ಲಿ ಸಾಲವಿದ್ದರೂ ಒಬ್ಬರಿಗೆ ಮಾತ್ರ ಸಾಲ ಮನ್ನಾ ಅನ್ವಯವಾಗುತ್ತದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಹಕಾರಿ ಕ್ಷೇತ್ರದ ಅಧಿಕಾರಿಗಳ ಕುಟುಂಬಗಳು ಹಾಗೂ ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವಂತಹ ರೈತರುಗಳು ಹಾಗೂ ಇತರ ಅನರ್ಹ ಕೃಷಿ ಸಾಲಗಾರರು ಈ ಸಾಲ ಮನ್ನಾ ಯೋಜನೆಯಿಂದ ಹೊರಗೆ ಇರುತ್ತಾರೆ.