ಭಾಗಮಂಡಲ, ಜು. 5: ನಬಾರ್ಡ್ ಹಿರಿಯ ಅಧಿಕಾರಿ ಲಂಬೋದರಿ ಭಾಗಮಂಡಲದ ವಿಎಸ್ಎಸ್ಎನ್ ಸಭಾಂಗಣದಲ್ಲಿ ರೈತರೊಂದಿಗೆ ನೇರ ಸಂವಾದ ಕಾರ್ಯಕ್ರಮ ನಡೆಸಿ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವದಾಗಿ ಹೇಳಿದರು. ಭಾಗಮಂಡಲ ವ್ಯಾಪ್ತಿಯ 25ಕ್ಕೂ ಅಧಿಕ ರೈತರು ವಿಶೇಷ ನೇರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಾಗಮಂಡಲ ವ್ಯಾಪ್ತಿಯಲ್ಲಿ ಕೃಷಿಗೆ ಯಾವ ರೀತಿಯ ಉತ್ತೇಜನ ನೀಡಬೇಕು. ಹೈನುಗಾರಿಕೆ ಡೈರಿ, ಗೋದಾಮು ನಿರ್ಮಿಸಿ ರೈತರು ಬೆಳೆದ ಬೆಳೆಯನ್ನು ಗೋದಾಮಿನಲ್ಲಿ ದಾಸ್ತಾನು ಇರಿಸುವಂತಾಗಬೇಕು. ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವಂತಾಗಬೇಕು. ಕಾಫಿ, ಏಲಕ್ಕಿ, ಕಾಳುಮೆಣಸಿನ ಬೆಲೆ ಕುಸಿದಿದ್ದು ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದರು. ಜಂಟಿ ಸ್ತ್ರೀಶಕ್ತಿ ಗುಂಪುಗಳಿಗೆ ನಬಾರ್ಡ್ನಿಂದ ಸಹಾಯಧನ ಮತ್ತು ಸಾಲ ನೀಡುವಂತೆ ಚರ್ಚೆ ನಡೆಸಿದರು. ಅಲ್ಲದೆ ಸಬ್ಸಿಡಿ ದರದಲ್ಲಿ ಗೊಬ್ಬರ ವಿತರಿಸಬೇಕು ಎಂದು ರೈತರು ಈ ಸಂದರ್ಭ ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಎಸ್ಎಸ್ಎನ್ ಅಧ್ಯಕ್ಷ ಹೊಸೂರು ಸತೀಶ್ಕುಮಾರ್ ವಹಿಸಿದ್ದರು. ನಬಾರ್ಡ್ ಅಧಿಕಾರಿ ಮುಂಡಂಡ ನಾಣಯ್ಯ, ರೈತರಾದ ವಿ.ಎಸ್. ನಾರಾಯಣಾಚಾರ್, ನಂಜುಂಡಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಮತ್ತಾರಿ ರಾಜ, ಭಾಸ್ಕರ್, ಸ್ಥಳೀಯರಾದ ದೇವಂಗೋಡಿ ಹರ್ಷ, ವಿಎಸ್ಎಸ್ಎನ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕಿ ಲಲಿತ, ನಿರ್ದೇಶಕರು ಉಪಸ್ಥಿತರಿದ್ದರು.