ಕುಶಾಲನಗರ, ಜು. 5: ವಾಹನ ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಮರಣ ದೃಢೀಕರಣ ಪತ್ರ ನೀಡಲು ಸತಾಯಿಸುತ್ತಿದ್ದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವರ್ತನೆ ಖಂಡಿಸಿ ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ತೊರೆನೂರು ಗ್ರಾಮದ ವ್ಯಕ್ತಿಯೊಬ್ಬರು ಕುಶಾಲನಗರ ಸಮೀಪ ಮುಳ್ಳುಸೋಗೆ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಸಾಗಿಸುತ್ತಿದ್ದ ಸಂದರ್ಭ ಮಾರ್ಗಮಧ್ಯೆ ಮೃತಪಟ್ಟಿದ್ದರು. ನಂತರ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ ಕುಟುಂಬಕ್ಕೆ ಮರಣ ದೃಢೀಕರಣ ಪತ್ರ ನೀಡುವಲ್ಲಿ ವಿಳಂಬ ಧೋರಣೆ ತಾಳುತ್ತಿದ್ದರು. ಈ ಹಿನ್ನೆಲೆಯಲ್ಲಿ ನೊಂದ ಕುಟುಂಬ ವರ್ಗ ಶಶಿಧರ್ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇದೀಗ ತಕ್ಷಣ ದೃಢೀಕರಣ ಪತ್ರ ನೀಡುವಂತೆ ನಿರ್ದೇಶಿಸುವದರೊಂದಿಗೆ ಕುಟುಂಬ ಸದಸ್ಯರಿಗೆ ಮರಣ ಪತ್ರ ನೀಡುವ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.