ಮಡಿಕೇರಿ, ಜು. 5: ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ ಶಿವಮೊಗ್ಗ ವ್ಯಾಪ್ತಿಯ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ವತಿಯಿಂದ ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯದಲ್ಲಿ ಆರ್ಕಿಡ್ ಕೃಷಿ ತರಬೇತಿ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅರಣ್ಯ ಮಹಾ ವಿದ್ಯಾಲಯದ ಪ್ರಬಾರಿ ಡೀನ್ ಡಾ. ದೇವಗುರು ಅವರು ಅರಣ್ಯ ಮಹಾವಿದ್ಯಾಲಯದ ಶಿಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಆರ್ಕಿಡ್ ಕೃಷಿಯನ್ನು ಒಂದು ವಾಣಿಜ್ಯ ಉದ್ದಿಮೆಯಾಗಿ ಕೈಗೊಳ್ಳಲು ಕೊಡಗಿನಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಪ್ರ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥೆ ಡಾ. ಕೆಂಚರೆಡ್ಡಿ ವಿಸ್ತರಣಾ ಘಟಕ ರೈತರ ಆದಾಯವನ್ನು ದ್ವಿಗುಣ ಗೊಳಿಸಲು ತರಬೇತಿ ಮತ್ತು ಕಾರ್ಯಾಗಾರಗಳನ್ನು ಕೊಡಗಿನ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದೆ. ಜೇನು ಕೃಷಿ, ಆರ್ಕಿಡ್ ಕೃಷಿ, ತರಕಾರಿ ಕೃಷಿ, ಮೀನುಗಾರಿಕೆ, ಎರೆಹುಳ ಗೊಬ್ಬರ ತಯಾರಿಕೆ, ಪುಷ್ಪ ಕೃಷಿ, ಯಾಂತ್ರೀಕೃತ ಭತ್ತದ ನಾಟಿ ಪ್ರಾತ್ಯಕ್ಷಿಕೆ ಮುಂತಾದವುಗಳ ಬಗ್ಗೆ ಕಾಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಮಗ್ರ ಕೃಷಿ ಪದ್ಧತಿಗೆ ಪೂರಕವಾದ ರೈತರು ಮತ್ತು ರೈತ ಸಂಘಗಳು ಆಸಕ್ತಿ ತೋರುವ ಯಾವದೇ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಘಟಕದ ವತಿಯಿಂದ ಏರ್ಪಡಿಸಲಾಗುವದು ಎಂದು ಮಾಹಿತಿ ನೀಡಿದರು.
ಅರಣ್ಯ ಮಹಾ ವಿದ್ಯಾಲಯದ ಯುವ ವಿಜ್ಞಾನಿ ಡಾ. ಕಾವೇರಿ ದೇವಯ್ಯ ಆರ್ಕಿಡ್ ಬೆಳೆಯವ ವಿಧಾನ, ಬೆಳೆಯ ಆರ್ಥಿಕತೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ನಂತರದ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮಹಾವಿದ್ಯಾಲಯದಲ್ಲಿ ಬೆಳೆದಿರುವ ವಿವಿಧ ಜಾತಿಯ ಆರ್ಕಿಡ್‍ಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಕೊಡಗಿನ ವಿವಿಧ ಭಾಗಗಳಿಂದ ಆಗಮಿಸಿದ್ದ 45 ರೈತ ಮತ್ತು ರೈತ ಮಹಿಳೆಯರು ಕಾಯಕ್ರಮದಲ್ಲಿ ಪಾಲ್ಗೊಂಡಿದರು. ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶ್ ಪ್ರಸಾದ್ ನಿರೂಪಿಸಿ, ವಂದಿಸಿದರು.