ಮಡಿಕೇರಿ, ಜು. 5: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಯುವ ಸಮೂಹಕ್ಕೆ ಭಾರತದಾದ್ಯಂತ ಉದ್ಯೋಗದ ಅವಕಾಶಗಳನ್ನು ಒದಗಿಸಿಕೊಡುವ ಮಹತ್ವದ ಚಿಂತನೆಯಡಿ ತಾ. 6 ಮತ್ತು 7 ರಂದು ಹತ್ತನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳ’ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಳ್ವಾಸ್ ಪ್ರಗತಿ ಮಾಧ್ಯಮ ಸಂಯೋಜಕಿ ಡಾ. ಮೌಲ್ಯ ಜೀವನ್ ರಾಂ ಅವರು, ಮೂಡಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‍ನಲ್ಲಿ ಎರಡು ದಿನಗಳ ಕಾಲ ನಡೆಯುವ ಉದ್ಯೋಗ ಮೇಳದೊಂದಿಗೆ, ಇದಕ್ಕೆ ಪೂರ್ವಭಾವಿಯಾಗಿ ಉದ್ಯೋಗಾರ್ಥಿಗಳಿಗೆ ಸಂದರ್ಶನವನ್ನು ಎದುರಿಸುವ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದು ತಿಳಿಸಿದರು.

ಕಳೆದ ಸಾಲಿನ ಉದ್ಯೋಗ ಮೇಳದಲ್ಲಿ 208 ಕಂಪೆನಿಗಳು ವಿವಿಧ ಹುದ್ದೆಗಳ ಭರ್ತಿಗಾಗಿ ಪಾಲ್ಗೊಂಡಿದ್ದವಾದರೆ, ಈ ಬಾರಿ 250ಕ್ಕೂ ಹೆಚ್ಚಿನ ಕಂಪೆನಿಗಳ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 16 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, ಇವರಲ್ಲಿ 1058 ಮಂದಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ದೊರಕಿತ್ತು. 2918 ಮಂದಿ ಉದ್ಯೋಗ ಪಡೆಯುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಉದ್ಯೋಗ ಮೇಳಗಳಲ್ಲಿ ವಿವಿಧ ಕಂಪೆನಿಗಳು ಹೆಚ್ಚಾಗಿ ಪುರುಷ ಅಭ್ಯರ್ಥಿಗಳ ಆಯ್ಕೆಯತ್ತ ಹೆಚ್ಚಿನ ಒಲವು ತೋರುತ್ತಿದ್ದವು. ಆದರೆ, ಈ ಬಾರಿ ಎಲ್‍ಎಂ ವಿಂಡ್ ಪವರ್, ಭಾರತ್ ಪ್ರಿಟ್ಸ್ ವರ್ನರ್ ಕಂಪೆನಿಗಳು ಬಿಇ ಮೆಕ್ಯಾನಿಕಲ್, ಡಿಪ್ಲೋಮಾ ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಆದ ಮಹಿಳಾ ಪದವೀಧರರನ್ನೇ ಆಯ್ಕೆ ಮಾಡಿಕೊಳ್ಳಲು ಉತ್ಸುಕರಾಗಿರುವದಾಗಿ ಡಾ. ಮೌಲ್ಯ ಜೀವನ್ ರಾಂ ತಿಳಿಸಿದರು.

ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‍ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೋಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‍ಜಿಒಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿ ಕಂಪೆನಿಗಳು ಪಾಲ್ಗೊಳ್ಳಲಿವೆ. ಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ವ್ಯದ್ಯಕೀಯ, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣೆ, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ ಹಾಗೂ ಸ್ನಾತಕೋತ್ತರ ಪದವೀಧರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆಯೆಂದು ತಿಳಿಸಿದರು.

ಆಸಕ್ತ ಉದ್ಯೋಗಾಕಾಂಕ್ಷಿಗಳು hಣಣಠಿ://ಚಿಟvಚಿsಠಿಡಿಚಿgಚಿಣi.ಛಿom ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಳಿಗೆ ಮೊ. 9611686148, 9663190590, 7892880902, 8494934852, 9008907716 ನ್ನು ಸಂಪರ್ಕಿಸಬಹುದು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ವಸತಿ ಮತ್ತು ಊಟದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆಂದು ಮಾಹಿತಿ ನೀಡಿದರು.

ದಾಖಲೆಗಳು ಬೇಕು: ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವÀವರು 5 ರಿಂದ 10 ಪಾಸ್ ಪೋರ್ಟ್ ಫೋಟೋಗಳನ್ನು, ಇತ್ತೀಚಿನ ರೆಸ್ಯೂಮ್, ದೃಢೀಕರಿಸಲ್ಪಟ್ಟ ಎಲ್ಲಾ, ಮಾಕ್ರ್ಸ್ ಕಾರ್ಡ್‍ಗಳ ಜೆರಾಕ್ಸ್ ಪ್ರತಿಗಳು, ಆನ್‍ಲೈನ್ ನೋಂದಣಿ ಸಂಖ್ಯೆಯನ್ನು ತರುವದು ಅತ್ಯವಶ್ಯವೆಂದು ತಿಳಿಸಿದರು.

ಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಪ್ರಗತಿ ಮೀಡಿಯಾದ ಸದಸ್ಯೆ ದೇವಿಶ್ರೀ ಶೆಟ್ಟಿ ಉಪಸ್ಥಿತರಿದ್ದರು.