ಕೂಡಿಗೆ, ಜು. 5: ಕಳೆದ ಒಂದು ತಿಂಗಳ ಹಿಂದೆ ನಡೆದ ರಸ್ತೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಇದೀಗ ಡಾಂಬರೀಕರಣ ಮಾಡಿದ ರಸ್ತೆ ಗುಂಡಿ ಬಿದ್ದು ತೀರಾ ಹಾಳಾಗಿದೆ.ಈ ರಸ್ತೆಯಲ್ಲಿ ಇಂದು ಬೈಕ್ ಸವಾರರು ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೆ ರಸ್ತೆಯ ಕಾಮಗಾರಿ ಮುಗಿದಿದೆ ಎಂದು ನಾಮಫಲಕವನ್ನು ಅಳವಡಿಸಲಾಗಿದೆ.ಇಂದು ಸಂಜೆ 6 ಗಂಟೆಯ ಸಮಯದಲ್ಲಿ ಮಲ್ಲೇನಹಳ್ಳಿ, ಹೆಗ್ಗಡಹಳ್ಳಿ ಗ್ರಾಮಸ್ಥರು ರಸ್ತೆ ಗುಂಡಿಬಿದ್ದು ಜಾಗಕ್ಕೆ ಬಾಳೆ ಮತ್ತು ಕೊಳೆತ ಕೆಸ ಗಿಡ ಮತ್ತು ಕೊಳೆತ ಕೇನೆ ಗಿಡಗಳನ್ನು ನೆಟ್ಟು ಪ್ರತಿಭಟನೆ ಮಾಡಿದರು.

ಕೂಡಿಗೆಯಿಂದ ಕೋವರ್‍ಕೊಲ್ಲಿ ರಸ್ತೆ ರೂ. 18 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ತೀರಾ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕ್ಷೇತ್ರದ ಶಾಸಕರು ಸ್ಥಳ ಪರಿಶೀಲನೆ ಮಾಡಿ ಗುತ್ತಿಗೆದಾರರಿಗೆ ಮರು ಡಾಂಬರೀಕರಣ ಮತ್ತು ಗುಂಡಿಗಳನ್ನು ಮುಚ್ಚುವಂತೆ ಸೂಚಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮಲ್ಲೇನಹಳ್ಳಿಯ ರವಿಕುಮಾರ್, ಮಂಜುನಾಥ, ಕಿರಣ, ರವಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.