ಮಡಿಕೇರಿ, ಜು. 5: ಮುಂಬರುವ ಲೋಕಸಭಾ ಚುನಾವಣೆ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರವಿರುವ ಹಂತದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು, ತಮಗೆ ಕೆಪಿಸಿಸಿ ಹೊಣೆಗಾರಿಕೆ ವಹಿಸಿದ್ದು, ಈ ಸನ್ನಿವೇಶದಲ್ಲಿ ವಿಶೇಷವಾಗಿ ಪಕ್ಷದ ಬಲವರ್ದನೆಗೆ ಕಾಳಜಿ ವಹಿಸುವೆ ಎಂದು ನೂತನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ ಮೇಲಿನ ನುಡಿಯಾಡಿದರಲ್ಲದೆ, ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಎಐಸಿಸಿ ವರಿಷ್ಠರು ತಮ್ಮ ಮೇಲೆ ವಿಶ್ವಾಸವಿಟ್ಟು ಪಕ್ಷದ ಹೊಣೆಗಾರಿಕೆ ವಹಿಸಿರುವದು ಹೆಮ್ಮೆ ತಂದಿದೆ ಎಂದು ಮಾರ್ನುಡಿದರು.ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುವದರೊಂದಿಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಸರಿಯಾದ ದಿಕ್ಕಿನಲ್ಲಿ ಜನಪರ ಆಡಳಿತ ಕಲ್ಪಿಸುವ ದಿಸೆಯಲ್ಲಿ ಉತ್ತಮ ಕೆಲಸ ಮಾಡುವಂತೆ ನೋಡಿಕೊಳ್ಳಲಾಗುವದು ಎಂದು ದಿನೇಶ್ ಗುಂಡೂರಾವ್ ವಿಶ್ವಾಸದ ನುಡಿಯಾಡಿದರು.
ಕೊಡಗು ಎಂದರೆ ಹೆಮ್ಮೆ : ತಮ್ಮ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೊಡಗಿನ ಬಗ್ಗೆ ಎಲ್ಲ ಕಾಲಕ್ಕೂ ಹೆಮ್ಮೆ ಪಡುವದಾಗಿ ನುಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗದಿದ್ದರೂ, ಸರಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲು ಪ್ರಾಮಾಣಿಕ ನೆಲೆಯಲ್ಲಿ ಪ್ರಯತ್ನಿಸಲಾಗುವದು ಎಂದು ಆಶಯ ವ್ಯಕ್ತಪಡಿಸಿದರು.
ಕೊಡಗಿನಲ್ಲಿಯೂ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಒತ್ತು ನೀಡಲಾಗುವದು ಎಂದ ಅವರು, ಈಗಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಮ್ಮಿಶ್ರ ಸರಕಾರದಿಂದ ಜನತೆಗೆ ಸಾಧ್ಯವಿರುವಷ್ಟು ಒಳ್ಳೆಯ ಆಡಳಿತ ನೀಡಲು ಕಾಳಜಿ ವಹಿಸಲಾಗುವದು ಎಂದು ದಿನೇಶ್ ಭರವಸೆ ನೀಡಿದರು. ಜಿಲ್ಲೆಯಲ್ಲಿ ಮಳೆಹಾನಿ ಸೇರಿದಂತೆ ಪರಿಸ್ಥಿತಿಯ ಬಗ್ಗೆ ತಮಗೆ ಅರಿವಿದ್ದು, ಆ ಬಗ್ಗೆಯೂ ಸರಕಾರದ ಗಮನ ಸೆಳೆಯುವೆ ಎಂದರು.
ಈಗಿನ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಪಕ್ಷದ ಜವಾಬ್ದಾರಿ ನೀಡಿರುವ ಹಿನ್ನೆಲೆ, ವ್ಯಾಪಕ ಪ್ರವಾಸ ಹಮ್ಮಿಕೊಂಡು ಸಂಘಟನೆಯ ಜತೆಗೆ ಬರುವ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಾಗಿದೆ ಎಂದ ಅವರು, ಆ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗುವದಾಗಿ ಮಾತಿಗೆ ತೆರೆ ಎಳೆದರು.