ಮಡಿಕೇರಿ, ಜು. 5: ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಸಾಹಿತಿ, ಹತ್ತು ಹಲವು ಸಾಂಸ್ಕøತಿಕ ಸಂಸ್ಥೆಗಳ ಮಾರ್ಗದರ್ಶಕರಾಗಿದ್ದ, ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳ ಜೀವನಕ್ಕೆ ದಾರಿ ಮಾಡಿಕೊಟ್ಟಂತಹ ದಿ. ಮಹಾಬಲೇಶ್ವರ ಭಟ್ಟರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೊಡಗು ಜಿಲ್ಲಾ ಲೇಖಕರ-ಕಲಾವಿದರ ಬಳಗದಿಂದ ಪತ್ರಿಕಾಭವನ ಟ್ರಸ್ಟ್‍ನ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಒಂದು ನಿಮಿಷದ ಮೌನಾಚರಣೆ ಹಾಗೂ ದಿವಂಗತರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮೊದಲುಗೊಂಡು ಗಣ್ಯವ್ಯಕ್ತಿಗಳಿಂದ ದಿ. ಮಹಾಬಲೇಶ್ವರ ಭಟ್ಟರ ಪಾರದರ್ಶಕ ವ್ಯಕ್ತಿತ್ವ, ಸದ್ವಿಚಾರ ಹಾಗೂ ಕೊಡುಗೆಗಳ ಬಗ್ಗೆ ವಿಚಾರ ವಿನಿಮಯವಾಯಿತು.

ದಿವಂಗತರ ಉತ್ಸಾಹ, ಕಳಕಳಿ, ವ್ಯವಸ್ಥಿತ ಹಾಗೂ ನಿಯಮಬದ್ಧ ಬದುಕಿನ ಪಕ್ಷಿನೋಟವನ್ನು ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪರಿಚಯಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸ್ವತಃ ‘ಅವತಾರ, ಕಹಳೆ, ದೈತ್ಯ ದರ್ಶನ’ ಮುಂತಾದ ಹತ್ತು ಹಲವು ಪುಸ್ತಕಗಳನ್ನು ಬರೆದಿದ್ದು, ಅನೇಕ ಸಾಹಿತ್ಯ-ಸಂಸ್ಕøತಿಗೆ ಸಂಬಂಧಪಟ್ಟಂತಹ ಸಂಸ್ಥೆಗಳನ್ನು ಬೆಳೆಸಿ ಮುನ್ನಡೆಸಿದ್ದರೆಂದು ಹೇಳಿದರು. ತಾವು ಬದುಕಿದ್ದಾಗಲೇ ತಮ್ಮ ಹೆಸರಿನಲ್ಲಿ ಒಂದು ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದ್ದು ವಿಶೇಷ ಎಂದು ಹೇಳಿದ ರಮೇಶ್ ಕಿರಿಯರೊಂದಿಗೆ ಸಲುಗೆಯಿಂದ ಬೆರೆತು ಸಂಸ್ಥೆಗಳನ್ನು ದಿವಂಗತರು ಮುನ್ನಡೆಸುತ್ತಿದ್ದರೆಂದು ಅಭಿಪ್ರಾಯಪಟ್ಟರು. ಪು.ರಾ. ಶ್ರೀನಿವಾಸ್, ಬಿ.ಆರ್. ಜೋಯಪ್ಪ, ಪಿ.ಕೆ. ಲತೀಫ್, ಲಿಯಾಕತ್ ಆಲಿ, ರಮೇಶ್ ಮುಂತಾದವರು ದಿವಂಗತರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಬಳಗದ ಪ್ರಧಾನ ಕಾರ್ಯದರ್ಶಿ ಐತಿಚಂಡ ರಮೇಶ್ ಕಾರ್ಯಕ್ರಮದ ಸಂಯೋಜನೆ ಮಾಡಿದರೆ, ಬೇಬಿ ಮ್ಯಾಥ್ಯು ವಂದಿಸಿದರು. ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿಗ ಬಿ.ಎನ್. ಮನು ಶೆಣೈ, ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್, ಬಳಗದ ಡಿ.ಪಿ. ರಾಜೇಶ್, ರೇವತಿ ರಮೇಶ್, ಪಿ.ಪಿ. ಸುನಿತಾ, ಶ್ರೀಧರ ಹೂವಲ್ಲಿ, ಶ್ವೇತಾ ರವೀಂದ್ರ ಉಪಸ್ಥಿತರಿದ್ದರು.